ಬೆಂಗಳೂರಿನ ಲಾಡ್ಜ್‌ನಲ್ಲಿ ಪುತ್ತೂರಿನ ಯುವಕ ಅನುಮಾನಾಸ್ಪದ ಸಾವು : ಜೊತೆಗಿದ್ದ ಯುವತಿ ಎಸ್ಕೇಪ್‌

ಒಂದು ವಾರದಿಂದ ಹೋಟೆಲ್‌ ಕೊಠಡಿಯಲ್ಲಿ ತಂಗಿದ್ದ ಯುವಕ-ಯುವತಿ

ಬೆಂಗಳೂರು: ಎಂಟು ದಿನ ಪ್ರೇಯಸಿ ಜೊತೆಗೆ ಹೋಟೆಲಿನಲ್ಲಿ ತಂಗಿದ್ದ ಪುತ್ತೂರಿನ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಡಿವಾಳದ ಲಾಡ್ಜ್‌ವೊಂದರಲ್ಲಿ ಸಂಭವಿಸಿದ್ದು, ಈ ಘಟನೆ ನಾನಾ ರೀತಿಯ ಅನುಮಾನಗಳಿಗೆ ಕಾರಣವಾಗಿದೆ. ಯುವಕನನ್ನು ಪುತ್ತೂರಿನ ತಕ್ಷಿತ್ (20) ಎಂದು ಗುರುತಿಸಲಾಗಿದೆ. ಅವನ ಜೊತೆಗಿದ್ದ ಯುವತಿ ಎಸ್ಕೇಪ್‌ ಆಗಿದ್ದಾಳೆ.

ಶುಕ್ರವಾರ (ಅ.18) ಯುವಕ ಸಾವನ್ನಪ್ಪಿದ್ದು, ಬೆಳಗ್ಗೆ ಲಾಡ್ಜ್ ಸಿಬ್ಬಂದಿ ರೂಂ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ಕಳೆದ ವಾರ ತನ್ನ ಪ್ರೇಯಸಿಯೊಂದಿಗೆ ಬೆಂಗಳೂರಿಗೆ ಬಂದಿದ್ದ. ತಕ್ಷಿತ್ ಆನ್‌ಲೈನ್ ಮೂಲಕ ಮಡಿವಾಳದಲ್ಲಿರುವ ಲಾಡ್ಜ್‌ವೊಂದರಲ್ಲಿ ರೂಂ ಬುಕ್ ಮಾಡಿದ್ದ. ಎಂಟು ದಿನ ಲಾಡ್ಜ್‌ನಲ್ಲಿ ಪ್ರೇಯಸಿಯೊಂದಿಗೆ ಇದ್ದ. ಗುರುವಾರ ಯುವತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಕೆ ವಿರಾಜಪೇಟೆಗೆ ಹೋಗಿದ್ದಳು. ಹುಡುಗಿ ಹೋದ ಮರುದಿನವೇ ಯುವಕ ಮೃತಪಟ್ಟಿದ್ದಾನೆ.





















































 
 

ತಕ್ಷಿತ್‌ ಕುಟುಂಬ ಮೂಲತ ತಮಿಳುನಾಡಿನವರಾಗಿದ್ದು, ಪ್ರಸ್ತುತ ಪುತ್ತೂರಿನ ಕೋಡಿಂಬಾಡಿ ಗ್ರಾಮ ಸೇಡಿಯಾಪಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದೆ. ಶುಕ್ರವಾರ ತಂದೆ ತಕ್ಷಿತ್‌ನ ಮೊಬೈಲ್‌ಗೆ ಕರೆ ಮಾಡಿದಾಗ ಆತ ಕರೆ ಸ್ವೀಕರಿಸಿರಲಿಲ್ಲ. ಸಂಜೆ ಮಡಿವಾಳ ಪೊಲೀಸರೇ ತಂದೆಯ ಮೊಬೈಲ್‌ಗೆ ಕರೆ ಮಾಡಿ ಆತ ಮೃತಪಟ್ಟಿರುವ ವಿಚಾರ ತಿಳಿಸಿದ್ದಾರೆ.

ತಕ್ಷಿತ್‌ ಮಂಗಳೂರಿನ ಪಣಂಬೂರಿನ ಕಾಲೇಜೊಂದರಲ್ಲಿ ಬಿಬಿಎ ಕಲಿಯುತ್ತಿದ್ದ. ವಿರಾಜಪೇಟೆ ಮೂಲದ ಪ್ರಿಯಾಂಕ ಎಂಬ ಯುವತಿ ಕೂಡ ಇದೇ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಬ್ಯಾಕ್‌ಲಾಗ್‌ ಕಾರಣ ಇಬ್ಬರೂ ಕಾಲೇಜು ಬಿಟ್ಟಿದ್ದರು. ಮನೆಯಲ್ಲಿ ಮೈಸೂರಿಗೆ ಕಲಿಯಲು ಹೋಗುವುದಾಗಿ ಹೇಳಿ ಹೋಗಿದ್ದ ತಕ್ಷಿತ್‌ ಪ್ರಿಯಾಂಕ ಜೊತೆ ಬೆಂಗಳೂರಿಗೆ ಹೋಗಿ ಮಡಿವಾಳದ ಗ್ರ್ಯಾಂಡ್‌ ಚಾಯ್ಸ್‌ ಎಂಬ ಲಾಡ್ಜ್‌ನಲ್ಲಿ ಅ.9ರಿಂದ ತಂಗಿದ್ದ.

ಎಂಟು ದಿನಗಳಿಂದ ಇಬ್ಬರೂ ಹೋಟೆಲ್‌ ಕೊಠಡಿಯಿಂದ ಹೊರಬಂದಿರಲಿಲ್ಲ. ಊಟ ತಿಂಡಿಯನ್ನು ಹೋಟೆಲ್‌ ಕೊಠಡಿಗೆ ತರಿಸಿಕೊಳ್ಳುತ್ತಿದ್ದರು. ತಕ್ಷಿತ್‌ ಮೃತಪಟ್ಟ ದಿನವೂ ಊಟವನ್ನು ಆನ್‌ಲೈನ್‌ ಮೂಲಕ ತರಿಸಿಕೊಂಡಿದ್ದರು. ಬಳಿಕ ಇಬ್ಬರಿಗೂ ಫುಡ್‌ ಪಾಯ್ಸನ್‌ ಆಗಿತ್ತು ಎನ್ನಲಾಗಿದೆ. ಬಳಿಕ ಪ್ರಿಯಾಂಕ ಕೊಠಡಿಯಿಂದ ಹೊರಗೆ ಹೋಗಿದ್ದಾಳೆ. ತಕ್ಷಿತ್‌ ಹೊರಬಾರದ ಕಾರಣ ಹೋಟೆಲ್‌ ಸಿಬ್ಬಂದಿ ಬೇರೊಂದು ಕೀಲಿಕೈ ಮೂಲಕ ಕೊಠಡಿ ಬಾಗಿಲು ತೆರೆದಾಗ ತಕ್ಷಿತ್‌ ನೆಲದ ಮೇಲೆ ಬಿದ್ದುಕೊಂಡಿದ್ದ.

ತಕ್ಷಿತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಯುವಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

error: Content is protected !!
Scroll to Top