ಪುತ್ತೂರು: ಜಿಡೆಕಲ್ಲಿನಲ್ಲಿರುವ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮಂಗಳೂರಿನ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶಗಳ ಸಹಯೋಗದಲ್ಲಿ ಸಾಹಿತ್ಯ ವಿಚಾರ ಗೋಷ್ಠಿ ಮತ್ತು ದತ್ತಿ ನಿಧಿ ವಿತರಣೆಯ ಒಂದು ದಿನದ ಕಾರ್ಯಕ್ರಮ ನಡೆಯಿತು.
ಗೋಷ್ಟಿ – 1
ಉದ್ಘಾಟನ ಸಮಾರಂಭದ ಬಳಿಕ ನಡೆದ ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ವಾಮದಪದವಿನ ಸ.ಪ್ರ.ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀಮತಿ ರೇಶ್ಮಾ ಭಟ್ ವಹಿಸಿ ಮಾತನಾಡಿ ಸಾಹಿತ್ಯದಲ್ಲಿ ಕಾಲಕಾಲಕ್ಕೆ ಗಮನ ಸೆಳೆಯುವ ದೃಷ್ಟಿಯಿಂದ ಬದಲಾವಣೆಗಳಾಗುತ್ತಾ ಇರುತ್ತವೆ. ಉತ್ತಮ ಕೃತಿಗಳನ್ನು ಓದುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆಯಿತ್ತರು. ವಿವಿಧ ಕಾಲೇಜುಗಳ 6 ಮಂದಿ ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡಿಸಿದರು. ಪ್ರೊ. ಪುಷ್ಪರಾಜ್ ಕೆ. ಅವರು ಗೋಷ್ಟಿಯನ್ನು ನಿರ್ವಹಿಸಿದರು.
ಗೋಷ್ಟಿ – 2
ಅಪರಾಹ್ನ ನಡೆದ ಎರಡನೇ ಗೋಷ್ಟಿಯ ಅಧ್ಯಕ್ಷತೆ ವಹಿಸಿದ ಶ್ರೀನಿವಾಸ ಕಾಲೇಜಿನ ಕನ್ನಡ ವಿಭಾಗದ ಸಂಶೋಧನ ಮಾರ್ಗದರ್ಶಕರಾದ ಡಾ. ರಾಜೇಶ್ ಬೆಜ್ಜಂಗಳರು ಮಾತನಾಡಿ ಕಲೆಗಳಲ್ಲಿ ತೊಡಗಿಸಿಕೊಂಡಾಗ ನಮ್ಮ ಸಾಹಿತ್ಯವು ಗಟ್ಟಿಯಾಗುತ್ತದೆ ಮಾತ್ರವಲ್ಲದೆ ಲವಲವಿಕೆಯಿಂದ ಇರಲು ಪೂರಕವಾಗುತ್ತದೆ. ಅಂತಹ ಕಲೆಗಳು ಸಾಹಿತ್ಯವನ್ನು ಹೆಚ್ಚು ಪ್ರಬುದ್ಧವಾಗಿ ರಚಿಸಲು ಮತ್ತು ಓದಿ ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು. ವಿದ್ಯಾರ್ಥಿಗಳೂ ಜ್ಞಾನದ ಹಸಿವನ್ನು ಹೆಚ್ಚಿಸಿಕೊಳ್ಳಬೇಕೆಂದು ಅವರು ಕರೆಯಿತ್ತರು. ವಿವಿಧ ಕಾಲೇಜುಗಳ 6 ಮಂದಿ ವಿದ್ಯಾರ್ಥಿಗಳು ಅವರ ಪ್ರಬಂಧಗಳನ್ನು ಮಂಡಿಸಿದರು. ಡಾ. ಹರಿಣಾಕ್ಷಿ ಎಂ.ಡಿ. ಅವರು ಅವರು ಗೋಷ್ಟಿಯನ್ನು ನಿರ್ವಹಿಸಿದರು.
ಪದ್ಮಾ ಶೆಣೈ, ಲಲಿತಾ ರೈ ಮತ್ತು ಎ.ಪಿ. ಮಾಲತಿ ದತ್ತಿನಿಧಿ ಬಹುಮಾನ ವಿಜೇತರು
ಮುಹಮ್ಮದ್ ತ್ವಯ್ಯಿಬ್, ಸ.ಪ್ರ.ದ. ಕಾಲೇಜು, ಮುಡಿಪು ಪ್ರಥಮ, ಲಿಖಿತಾ ಪಿ., ಸಂತ ಫಿಲೋಮಿನಾ ಕಾಲೇಜು, ಪುತ್ತೂರು ದ್ವಿತೀಯ ಮತ್ತು ಜೀವನ್ ಪಿ., ಸ.ಪ್ರ.ದ. ಕಾಲೇಜು, ಪುತ್ತೂರು, ಜಿಡೆಕಲ್ಲು ತೃತೀಯ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಹಿರಿಯ ಲೇಖಕಿ ಬಿ.ಎಂ. ರೋಹಿಣಿ, ಸಮಾಜ ಸೇವಕಿ, ವಾಚಕಿ ಶ್ರೀಮತಿ ವಿಜಯಲಕ್ಷ್ಜೀ ಭಟ್ ಮತ್ತು ಡಾ. ಹರಿಣಾಕ್ಷಿ ಎಂ.ಡಿ.ಯವರು ಪ್ರಬಂಧ ಸ್ಪರ್ಧೆಯ ನಿರ್ಣಾಯಕರಾಗಿ ಸಹಕರಿಸಿದರು.
ಶ್ರದ್ಧಾಂಜಲಿ
ಇತ್ತೀಚೆಗೆ ಅಗಲಿದ ದತ್ತಿನಿಧಿ ಸ್ಥಾಪಕರಲ್ಲಿ ಓರ್ವರಾದ ಶ್ರೀಮತಿ ಲಲಿತಾ ರೈಯವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಸಮಾರೋಪ
ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ನೀಡಿದ ಸ.ಪ.ಪೂ. ಕಾಲೇಜು ಜಿಡೆಕಲ್ಲು ಇಲ್ಲಿನ ಪ್ರಾಂಶುಪಾಲೆ ಡಾ. ಜ್ಯೋತಿ ಜಿಡೆಕಲ್ಲು ಅವರು ಕರಾವಳಿಯ ಮಹಿಳೆಯರು ಮಾಡಿರುವ ಸಾಧನೆಗಳು ಅನನ್ಯವಾದುದು ಎಂದು ಅಭಿಪ್ರಾಯ ಪಟ್ಟರು. ಸಾಹಿತ್ಯ, ಬರವಣಿಗೆ, ಓದು, ಸಂಘಟನೆಗಳೆಲ್ಲವೂ ಅಗತ್ಯವಾಗಿದ್ದು ಸಾಹಿತ್ಯದ ಓದು ನಮಗೆ ಶಕ್ತಿಯನ್ನು ನೀಡುತ್ತದೆ ಎಂದು ಪ್ರತಿಪಾದಿಸಿದರು.
ಅತಿಥಿಯಾಗಿದ್ದ ಶ್ರೀಮತಿ ಎ.ಪಿ. ಮಾಲತಿಯವರು ಮಾತನಾಡಿ ಸಾಹಿತ್ಯ ರಚನೆಯಲ್ಲಿ ಎಚ್ಚರಿಕೆಯನ್ನು ವಹಿಸಿಕೊಂಡು ಜೀವಂತಿಕೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿ ಇತರ ಉದ್ಯೋಗಗಳ ಜೊತೆಗೆ ಸಾಹಿತ್ಯ ಕೃಷಿ ಮಾಡಬಹುದು ಎಂದು ನುಡಿದರು.
ಅಧ್ಯಕ್ಷತೆಯನ್ನು ಕ.ಲೇ.ವಾ. ಸಂಘದ ಅಧ್ಯಕ್ಷೆ ಶ್ರೀಮತಿ ಶಕುಂತಳಾ ಟಿ. ಶೆಟ್ಟಿಯವರು ವಹಿಸಿ ಮಾತನಾಡಿ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಜಾಗೃತಿಯನ್ನು ಮೂಡಿಸಿಕೊಳ್ಳುವಂತಾಗಲು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜಿಡೆಕಲ್ಲಿನ ಸ.ಪ್ರ.ದ. ಕಾಲೇಜು ಮಾಡಿದ ಕಾರ್ಯ ಸ್ತುತ್ಯರ್ಹ ಎಂದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಅವರು ಮಾತನಾಡಿ ವಿದ್ಯಾರ್ಥಿಗಳ ಒಟ್ಟು ಪರಿಶ್ರಮವನ್ನು ಶ್ಲಾಘಿಸಿ ಶುಭ ಹಾರೈಸಿದರು.
ಸಮಾರೋಪ ಸಮಾರಂಭದ ನಿರ್ವಹಣೆಯನ್ನು ಪ್ರೊ. ಪುಷ್ಪರಾಜ್ ಕೆ.ಯವರು ನಿರ್ವಹಿಸಿ, ಕ.ಲೇ.ವಾ. ಸಂಘದ ಕಾರ್ಯದರ್ಶಿ ಶ್ರೀಮತಿ ಯಶೋದಾ ಮೋಹನ್ ಸ್ವಾಗತ, ಕ.ಲೇ.ವಾ. ಸಂಘದ ಕೋಶಾಧಿಕಾರಿ ಮೋಲಿ ಮಿರಾಂದಾ ವಂದನಾರ್ಪಣೆ ಮತ್ತು ಡಾ. ಹರಿಣಾಕ್ಷಿ ಎಂ.ಡಿ.ಯವರು ಅತಿಥಿಗಳ ಪರಿಚಯಗಳನ್ನು ನೆರವೇರಿಸಿದರು.
























