ಕಾಂಗ್ರೆಸ್ ದ್ವೇಷದ ಕ್ರಮ ಎಂದು ಹರಿಹಾಯ್ದ ಬಿಜೆಪಿ, ಆರ್ಎಸ್ಎಸ್ ನಾಯಕರು
ಬೆಂಗಳೂರು : ರಾಜ್ಯದಲ್ಲಿ ಆರ್ಎಸ್ಎಸ್ಗೆ ನಿರ್ಬಂಧ ವಿಚಾರ ಸದ್ದು ಮಾಡುತ್ತಿರುವ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆಯವರ ಚಿತ್ತಾಪುರ ಕ್ಷೇತ್ರದಲ್ಲಿ ಅ. 19ರಂದು ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನಕ್ಕಾಗಿ ಅಳವಡಿಸಿದ ಅಲಂಕಾರಿಕ ಕೇಸರಿ ಧ್ವಜಗಳು, ಬ್ಯಾನರ್ಗಳನ್ನು, ಕೇಸರಿ ಪತಾಕೆಗಳನ್ನು ತೆರವುಗೊಳಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ವಿಜಯ ದಶಮಿ ಉತ್ಸವ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಸಂಭ್ರಮಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸಿಕೊಳ್ಳಲಾಗುತ್ತಿತ್ತು. ಚಿತ್ತಾಪುರ ಪಟ್ಟಣದ ಪ್ರಮುಖ ವೃತ್ತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಕೇಸರಿ ಬಣ್ಣದ ಪರಾರಿ, ಅಭಿಮಾನಿಗಳು ಬ್ಯಾನರ್ಗಳನ್ನು, ಭಗವಾ ಧ್ವಜಗಳನ್ನು ಕಟ್ಟಿದ್ದರು. ಆದರೆ ಪರವಾನಗಿ ಇಲ್ಲದೆ ಅಳವಡಿಸಲಾಗಿದೆ ಎಂದು ಪುರಸಭೆ ನೌಕರರು ಸಿಬ್ಬಂದಿಗಳು ರಾತ್ರೋರಾತ್ರಿ ಆಗಮಿಸಿ ತೆರವುಗೊಳಿಸಿದ್ದಾರೆ.
ಶಾಲೆ-ಕಾಲೇಜುಗಳ ಮೈದಾನ, ಸಾರ್ವಜನಿಕ ಸರಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳು ಕಾರ್ಯಕ್ರಮ ಆಚರಿಸಬೇಕಾದರೆ ಪೂರ್ವಾನುಮತಿ ಕಡ್ಡಾಯ ಎಂದು ಸಚಿವ ಸಂಪುಟ ಸಭೆಯಲ್ಲಿ ಗುರುವಾರ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇರಳ, ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ, ಈ ಸಂಬಂಧ ಕಾನೂನು ರಚಿಸಲಾಗುತ್ತದೆ ಎಂದೂ ಸಚಿವರು ತಿಳಿಸಿದ್ದರು. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಬರೆದ ಪತ್ರವೇ ಕಾರಣವಾಗಿತ್ತು.
ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಕೊಡಬಾರದು, ಇವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಸಂಘ ಸಂಸ್ಥೆ, ಅನುಮತಿ ಪಡೆಯದೆ ಕಾರ್ಯಕ್ರಮ ನಡೆಸಿ, ಮುಗ್ಧ ಮಕ್ಕಳು-ಯುವಜನರ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದರು. ಆ ಪ್ರಕಾರ ಚರ್ಚೆ ನಡೆಸಿ ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಕಡ್ಡಾಯ ಎಂದು ನಿರ್ಧಾರಕ್ಕೆ ಬರಲಾಗಿತ್ತು. ಹೀಗಾಗಿ ಚಿತ್ತಾಪುರದಲ್ಲಿ ಅನುಮತಿ ಪಡೆಯದೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದ ಹಿನ್ನೆಲೆ ಪುರಸಭೆ ನೌಕರರು-ಸಿಬ್ಬಂದಿ ಭಗವಾ ಧ್ವಜ, ಬ್ಯಾನರ್ಗಳನ್ನು ತೆರವು ಮಾಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರದಲ್ಲೇ ಈ ಘಟನೆ ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದು ಕೇವಲ ಆಡಳಿತಾತ್ಮಕ ಕ್ರಮವಲ್ಲ, ಬದಲಿಗೆ ರಾಜಕೀಯ ಪ್ರೇರಿತ ದ್ವೇಷದ ಕಾರ್ಯಾಚರಣೆ ಎಂದು ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
























