ಪಾಕಿಸ್ತಾನ ವಾಯುದಾಳಿಗೆ ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಸಾವು

ಕದನ ವಿರಾಮ ಇರುವಾಗಲೇ ದಾಳಿ-ತ್ರಿಕೋನ ಸರಣಿಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ ಎಸಿಬಿ

ಕಾಬೂಲ್: ಪಾಕಿಸ್ತಾನದ ಗಡಿಯಲ್ಲಿರುವ ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ ಮೂವರು ಆಫ್ಘನ್ ಕ್ರಿಕೆಟಿಗರು ಸೇರಿದಂತೆ ಕನಿಷ್ಠ ಎಂಟು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಉಭಯ ದೇಶಗಳ ನಡುವೆ ಈಗಾಗಲೇ ಹದಗೆಟ್ಟಿರುವ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸಿದೆ.

ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಪ್ರಕಾರ, ಮುಂದಿನ ತಿಂಗಳು ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಭಾಗವಹಿಸಲು ಆಟಗಾರರು ಉರ್ಗುನ್‌ನಿಂದ ಪಕ್ತಿಕಾ ಪ್ರಾಂತ್ಯದ ಶರಣಾಗೆ ಪ್ರಯಾಣಿಸಿದ್ದರು. ಈ ವೇಳೆ ದಾಳಿ ನಡೆದಿದೆ.





















































 
 

ಮೃತಪಟ್ಟ ಕ್ರಿಕೆಟಿಗರನ್ನು ಕಬೀರ್, ಸಿಬ್ಗತುಲ್ಲಾ ಮತ್ತು ಹಾರೂನ್ ಎಂದು ಗುರುತಿಸಲಾಗಿದೆ. ಇವರೊಂದಿಗೆ ಇನ್ನೂ ಐದು ಮಂದಿ ನಾಗರಿಕರು ದಾಳಿಗೆ ಬಲಿಯಾಗಿದ್ದಾರೆ. ಈ ದಾಳಿಯನ್ನು ‘ಪಾಕಿಸ್ತಾನ ಆಡಳಿತ ನಡೆಸಿದ ಹೇಡಿತನದ ಕೃತ್ಯ’ ಎಂದು ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಕಟುವಾಗಿ ಟೀಕಿಸಿದೆ. ಮೃತರಿಗೆ ಗೌರವ ಸೂಚಕವಾಗಿ, ಅಫ್ಘಾನಿಸ್ತಾನವು ತ್ರಿಕೋನ ಸರಣಿಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದೆ.

ಶುಕ್ರವಾರ ಪಾಕಿಸ್ತಾನ ಪಕ್ತಿಕಾ ಪ್ರಾಂತ್ಯದ ಮೇಲೆ ಸರಣಿ ವಾಯುದಾಳಿಗಳನ್ನು ನಡೆಸಿದೆ ಎಂದು ಆಫ್ಘನ್ ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿಯು ಎರಡು ದೇಶಗಳ ನಡುವಿನ 48 ಗಂಟೆಗಳ ಕದನ ವಿರಾಮ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಾಲಿಬಾನ್‌ ಸರ್ಕಾರ ಆರೋಪಿಸಿದೆ. ಅಫ್ಘಾನಿಸ್ತಾನದ ಉರ್ಗುನ್ ಮತ್ತು ಬರ್ಮಲ್ ಜಿಲ್ಲೆಗಳ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದ್ದು, ಇದರಿಂದಾಗಿ ನಾಗರಿಕ ಸಾವುನೋವುಗಳು ಸಂಭವಿಸಿವೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ಸಂಘರ್ಷವನ್ನು ಕಡಿಮೆ ಮಾಡುವ ಉದ್ದೇಶದಿಂದ ದೋಹಾದಲ್ಲಿ ಮಾತುಕತೆ ನಡೆಯುತ್ತಿದ್ದು, ಅಲ್ಲಿಯವರೆಗೆ ಕದನ ವಿರಾಮವನ್ನು ವಿಸ್ತರಿಸಲು ಉಭಯ ದೇಶಗಳು ಒಪ್ಪಿಕೊಂಡಿದ್ದವು. ಶನಿವಾರದಿಂದ ಮಾತುಕತೆಗಳು ಪುನರಾರಂಭಗೊಳ್ಳಬೇಕಿತ್ತು. ಆದರೆ, ಈ ನಡುವೆಯೇ ಪಾಕಿಸ್ತಾನವು ದಾಳಿ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಮಾತುಕತೆಯ ಮೇಲೆ ಕರಿನೆರಳು ಆವರಿಸುವಂತೆ ಮಾಡಿದೆ.

error: Content is protected !!
Scroll to Top