ಗೋಹತ್ಯೆ ನಡೆಸಿದ ಸ್ಥಳಗಳೆಂದು ಗುರುತಿಸಿ ಮುಟ್ಟುಗೋಲು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿರುವ ಜಾನುವಾರು ಹತ್ಯೆ ಪ್ರಕರಣಗಳ ತನಿಖೆಯ ಭಾಗವಾಗಿ ಕಸಾಯಿಖಾನೆಗಳಿದ್ದ ಸ್ಥಳಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಮತ್ತು ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಕೆರೆಬಳಿ ಪ್ರದೇಶದಲ್ಲಿ ಆರೋಪಿಗಳಾದ ನಾಸೀರ್ ಮತ್ತು ಇತರರು ದನವನ್ನು ತಂದು ವಧೆ ಮಾಡಿದ ಸ್ಥಳವೆಂದು ಪತ್ತೆಯಾಗಿದ್ದು, ಅಲ್ಲಿನ ಆರೋಪಿಗಳ ವಾಸದ ಮನೆ, ಕಸಾಯಿಖಾನೆಯ ಶೆಡ್ ಹಾಗೂ ಜಾನುವಾರನ್ನು ಕಟ್ಟಿಹಾಕಿದ್ದ ಶೆಡ್‌ಗಳನ್ನು ತನಿಖಾಧಿಕಾರಿಯವರು ಜಪ್ತಿ ಮಾಡಿದ್ದಾರೆ. ಮುಟ್ಟುಗೋಲು ವಿಧಿಸಲು ಮಂಗಳೂರು ಉಪವಿಭಾಗಿ ದಂಡಾಧಿಕಾರಿ ರವರಿಗೆ ಸಂಬಂಧಿಸಿದ ವರದಿ ನಿವೇದಿಸಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ ಮತ್ತು ಬಿಎನ್‌ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ವೇಳೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಬಳಿಯ ಮಹಮ್ಮದ್ ರಫೀಕ್ ಎಂಬಾತನ ಮನೆ ಹಾಗೂ ಪ್ರಸ್ತುತ ಖಾಲಿ ಜಾಗವನ್ನು, ಕೃತ್ಯಕ್ಕೆ ಬಳಸಿರುವ ಸ್ಥಳವೆಂದು ಪತ್ತೆ ಹಚ್ಚಿ ಅದನ್ನು ತನಿಖಾಧಿಕಾರಿಯವರು ಜಪ್ತಿ ಮಾಡಿದ್ದಾರೆ. ಮುಟ್ಟುಗೋಲು ವಿಧಿಸಲು ಪುತ್ತೂರು ಉಪವಿಭಾಗಿ ದಂಡಾಧಿಕಾರಿಯವರಿಗೆ ವರದಿ ಸಲ್ಲಿಸಲಾಗಿದೆ.
























