ಬೆಂಗಳೂರು: ಗಾಯಕಿ ಸುಹಾನಾ ಸೈಯದ್ ಅವರು ತಮ್ಮ ಬಹುಕಾಲದ ಸ್ನೇಹಿತ ನಿತಿನ್ ಶಿವಾಂಶ್ ಅವರ ಜೊತೆಗೆ ಕವಿ ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯದ ರೀತಿಯಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟರು.
ಕನಕಪುರದ ಖಾಸಗಿ ರೆಸಾರ್ಟ್ ಒಂದರಲ್ಲಿ ಈ ಕಾರ್ಯಕ್ರಮ ನಡೆಯಿತು. ಸಾಗರ ಮೂಲದವರಾದ ಸುಹಾನ ಅವರು ಖಾಸಗಿ ವಾಹಿನಿಯ ರಿಯಾಲಿಟಿ ಶೋ ಸರಿಗಮಪ ದಲ್ಲಿ ಸ್ಪರ್ಧಿಸಿದ್ದು, ತಮ್ಮ ಸ್ವರ ಮಾಧುರ್ಯದ ಮೂಲಕವೇ ಜನರಿಗೆ ಪರಿಚಿತರಾದವರು. ನಿತೀಶ್ ಅವರು ರಂಗ ಭೂಮಿ, ಸಿನಿ ಕಲಾವಿದರಾಗಿದ್ದು ಇವರಿಬ್ಬರದು 16 ವರ್ಷಗಳ ಸ್ನೇಹ.
ಇವರ ವಿವಾಹದ ಆಮಂತ್ರಮ ಪತ್ರಿಕೆಯಲ್ಲಿ ‘ಪ್ರೀತಿ ವಿಶ್ವದ ಭಾಷೆ. ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ ದೇವ ವಿರಚಿತ. ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಜೊತೆಯಾಗಲಿರುವ ಸುಹಾನಾ ಹಾಗೂ ನಿತಿನ್. ನಮ್ಮ ನಡೆ ವಿಶ್ವಾ ಮಾನವತ್ವದೆಡೆ. ಸಹೃದಯಿಗಳೇ, ಬನ್ನಿ ಹರಸಿ. ಆಶೀರ್ವದಿಸಿ’ ಎಂದು ಬರೆಯುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
























