ಬೆದರಿಕೆ ಹಿನ್ನೆಲೆ ಸಚಿವರಿಗೆ ಭದ್ರತೆ ಹೆಚ್ಚಳ
ಬೆಂಗಳೂರು: ಆರ್ಎಸ್ಎಸ್ ಚಟುವಟಿಕೆ ನಿಷೇಧಿಸಬೇಕೆಂದು ಪತ್ರ ಬರೆದ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕರೆ ಮಾಡಿದ್ದ ವ್ಯಕ್ತಿಯ ಮೂಲ ಪತ್ತೆ ಹಚ್ಚಿದ್ದಾರೆ.
ಕರೆ ಮಾಡಿದ ವ್ಯಕ್ತಿಯನ್ನು ಮಹಾರಾಷ್ಟ್ರದ ಸೋಲಾಪುರ ಮೂಲದ ದಾನೇಶ್ ನರೋಣ ಎಂದು ತಿಳಿದುಬಂದಿದೆ. ಆರ್ಎಸ್ಎಸ್ ಬಗ್ಗೆ ಮಾತನಾಡಿದ್ದಕ್ಕೆ ವ್ಯಕ್ತಿಯೋರ್ವ ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿ ಬೆದರಿಕೆ ಹಾಕಿ ಅವಾಚ್ಯ ಪದಗಳಿಂದ ನಿಂದಿಸಿದ್ದ. ಈ ಕುರಿತು ಪ್ರಿಯಾಂಕ್ ಖರ್ಗೆ ದೂರು ನೀಡಲು ಹಿಂದೇಟು ಹಾಕಿದ್ದರು. ಆದರೆ ಕಾಂಗ್ರೆಸ್ ಮುಖಂಡ ಮನೋಹರ್ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆಗಿಳಿದು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಬೆಂಗಳೂರು ಪೊಲೀಸರು ಬೆದರಿಕೆ ಕರೆ ಮಾಡಿದ ವ್ಯಕ್ತಿಯ ಜಾಡು ಹಿಡಿದು ಹೊರಟಿದ್ದಾರೆ. ಪ್ರಿಯಾಂಕ್ ಖರ್ಗೆ ಕರೆ ಮಾಡಿದ ವ್ಯಕ್ತಿಯ ವಿರುದ್ಧ ದೂರು ನೀಡದಿದ್ದರೂ ಆ ಕರೆಯನ್ನು ರೆಕಾರ್ಡ್ ಮಾಡಿ ಸಂಭಾಷಣೆಯನ್ನು ತನ್ನ ಸೋಷಿಯಲ್ ಮೀಡಿಅಯ ಖಾತೆಗಳಲ್ಲಿ ಹಂಚಿಕೊಂಡಿದ್ದರು.
ಈ ನಡುವೆ ಪ್ರಿಯಾಂಕ ಖರ್ಗೆಗೆ ಬೆದರಿಕೆ ಇದೆ ಎಂದು ಹೇಳಿಕೊಂಡು ಸರ್ಕಾರ ಅವರ ಭದ್ರತೆಯನ್ನು ಹೆಚ್ಚು ಮಾಡಿದೆ. ಖರ್ಗೆಯ ಬೆಂಗಳೂರಿನಲ್ಲಿರುವ ಮತ್ತು ಕಲಬುರಗಿಯಲ್ಲಿರುವ ಮನೆಗಳಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.
























