ಒಂದೇ ಕಡೆ ಹತ್ತು ಶವ ಹೂತ ಹೊಸ ಕಥೆ : ಧರ್ಮಸ್ಥಳ ಪ್ರಕರಣಕ್ಕೆ ಟ್ವಿಸ್ಟ್‌

ಎಸ್‌ಐಟಿಗೆ ತಿಳಿಸದ ವಿಚಾರವನ್ನು ನ್ಯಾಯಾಲಯಕ್ಕೆ ಹೇಳಿದ ಆರೋಪಿ ಚಿನ್ನಯ್ಯ

ಧರ್ಮಸ್ಥಳ : ಧರ್ಮಸ್ಥಳ ಪ್ರಕರಣದ ತನಿಖೆ ಒಂದು ಹಂತಕ್ಕೆ ಬಂತು ಎನ್ನುವಾಗಲೇ ಆರೋಪಿ ಚಿನ್ನಯ್ಯ ಮಂಗಳವಾರ ಹೊಸ ಕಥೆ ಹೇಳಿ ಇಡೀ ಪ್ರಕರಣಕ್ಕೆ ಟ್ವಿಸ್ಟ್‌ ನೀಡಿದ್ದಾನೆ. ಕೋರ್ಟ್‌ ಮುಂದೆ ಚಿನ್ನಯ್ಯ ತಾನು ಒಂದೇ ಜಾಗದಲ್ಲಿ ಹತ್ತು ಮೃತದೇಹ ಹೂತಿದ್ದಾಗಿ ಸ್ಫೋಟಕ ಹೇಳಿಕೆ ಕೊಟ್ಟಿದ್ದಾನೆ. ಆದರೆ, ಯಾವ ಜಾಗದಲ್ಲಿ, ಎಲ್ಲಿ, ಯಾವಾಗ ಎಂದು ಮಾತ್ರ ಹೇಳಿಲ್ಲ. ಎಸ್‌ಐಟಿ ಮುಂದೆ ಇಷ್ಟರ ತನಕ ಕೊಡದ ಈ ಮಾಹಿತಿಯನ್ನು ಕೋರ್ಟ್‌ ಮುಂದೆ ಹೇಳಿರುವುದರಿಂದ ಅಧಿಕಾರಿಗಳು ಶಾಕ್‌ ಆಗಿದ್ದಾರೆ. ಚಿನ್ನಯ್ಯನ ಹೊಸ ವರಸೆ ತನಿಖಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಬೆಳ್ತಂಗಡಿ ಕೋರ್ಟ್‌ನಲ್ಲಿ ಬಿಎನ್ಎಸ್ 183 ಅಡಿ ಹೇಳಿಕೆ ದಾಖಲಿಸುವ ವೇಳೆ ಒಂದೇ ಜಾಗದಲ್ಲಿ ಹತ್ತು ಶವ ಹೂತಿರುವುದಾಗಿ ಹೇಳಿಕೆ ಕೊಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಹತ್ತು ಶವ ಎಲ್ಲಿ ಹೂಳಲಾಗಿದೆ ಎಂದು ಆಳವಾದ ತನಿಖೆ ನಡೆಸಲು ಎಸ್ಐಟಿ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಚಿನ್ನಯ್ಯ ಸದ್ಯ ಶಿವಮೊಗ್ಗ ಜೈಲಿನಲ್ಲಿರುವುದರಿಂದ, ಅಲ್ಲೇ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಹೇಳಿಕೆಯ ಸತ್ಯಾಸತ್ಯತೆ ಮತ್ತು ಹಿಂದಿನ ಹೇಳಿಕೆಗಳಿಗೂ ಇದಕ್ಕೂ ಇರುವ ವ್ಯತ್ಯಾಸಗಳ ಬಗ್ಗೆ ಎಸ್ಐಟಿ ತನಿಖೆ ನಡೆಸಲಿದೆ.





















































 
 

ಧರ್ಮಸ್ಥಳದಲ್ಲಿ ಅನಾಥ ಶವಗಳನ್ನು ಮರಣೋತ್ತರ ಪರೀಕ್ಷೆ ಇಲ್ಲದೆ ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ತನಿಖೆ ನಿರ್ಣಾಯಕ ಹಂತ ತಲುಪಿದೆ. ಆದರೆ ಚಿನ್ನಯ್ಯ ಮತ್ತೊಂದು ಹೇಳಿಕೆ ಕೊಟ್ಟಿರುವ ಕಾರಣ ಪ್ರಣವ್‌ ಮೊಹಂತಿ ನೇತೃತ್ವದ ತಂಡ ತನಿಖೆ ಚುರುಕುಗೊಳಿಸುತ್ತದೆ ಎನ್ನಲಾಗಿದೆ.

ಸಾಕ್ಷಿದಾರನ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿರುವ ಕಾರಣದಿಂದಾಗಿ, ಎಸ್‌ಐಟಿ ಪೊಲೀಸರು ಆತನ ಹೇಳಿಕೆಗಳನ್ನು ಮರುಪರಿಶೀಲನೆ ಮಾಡಲು ಮುಂದಾಗಿದ್ದಾರೆ. ಸಾಕ್ಷಿದಾರನನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯುವ ಬದಲು, ಆತ ಪ್ರಸ್ತುತ ಇರುವ ಶಿವಮೊಗ್ಗ ಜೈಲಿಗೆ ಭೇಟಿ ನೀಡಿ ವಿಚಾರಣೆ ನಡೆಸಲು ಅನುಮತಿ ಕೇಳಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಮೊದಲ ದಿನದಿಂದಲೇ ಇಡೀ ಪ್ರಕರಣದ ಹಾದಿ ತಪ್ಪಿಸುವ ರೀತಿಯಲ್ಲೇ ಹೇಳಿಕೆ ಕೊಟ್ಟುಕೊಂಡು ಬಂದಿದ್ದ ಚಿನ್ನಯ್ಯ ಇದೀಗ ಮತ್ತೆ ವರಸೆ ಬದಲಿಸಿರುವುದು ತನಿಖಾಧಿಕಾರಿಗಳನ್ನೆ ತಬ್ಬಿಬ್ಬುಗೊಳಿಸಿದೆ.

error: Content is protected !!
Scroll to Top