ಚಲಿಸುತ್ತಿದ್ದ ಬಸ್‌ ಬೆಂಕಿಗಾಹುತಿ : 20 ಪ್ರಯಾಣಿಕರು ಜೀವಂತ ಸುಟ್ಟು ಕರಕಲು

ಖರೀದಿಸಿ ಐದು ದಿನವಷ್ಟೇ ಆಗಿದ್ದ ಬಸ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಅವಘಡ

ಜೈಪುರ : ರಾಜಸ್ಥಾನದ ಜೈಸಲ್ಮೇರ್ ಬಳಿ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ 20 ಜನರು ಜೀವಂತ ಸುಟ್ಟು ಕರಕಲಾದ ದಾರುಣ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಹೊಸದಾಗಿ ಖರೀದಿ ಮಾಡಿದ್ದ ಬಸ್‌ ಕೆಲವೇ ಟ್ರಿಪ್‌ಗಳನ್ನಷ್ಟೇ ಮಾಡಿತ್ತು ಎಂದು ತಿಳಿದುಬಂದಿದೆ.

ಸಂಜೆ 4 ಗಂಟೆಗೆ ಪ್ರಯಾಣ ಆರಂಭಿಸಿದ ಬಸ್‌ ಹೆದ್ದಾರಿಯಲ್ಲಿ ಚಲಿಸುತ್ತಿರುವಾಗ ಹಿಂಬದಿಯಿಂದ ಹೊಗೆ ಬರಲಾರಂಭಿಸಿದೆ. ಚಾಲಕ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿ ಏನಾಗಿದೆ ಎಂದು ಪರಿಶೀಲಿಸುವಷ್ಟರಲ್ಲಿ ಇಡೀ ಬಸ್‌ಗೆ ಬೆಂಕಿ ಹತ್ತಿಕೊಂಡಿದೆ. ಒಳಗೆ ಸಿಲುಕಿಕೊಂಡ 57 ಪ್ರಯಾಣಿಕರು ಹೊರಬರಲು ಸಾಧ್ಯವಾಗದೆ ಒದ್ದಾಡಿದರು.





















































 
 

20ಕ್ಕೂ ಹೆಚ್ಚು ಜನರು ಸುಟ್ಟ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಜನರ ಹಲವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪೈಕಿ ನಾಲ್ವರು ಮಹಿಳೆಯರು, ಆರು ಮಕ್ಕಳ ಸಹಿತ 15 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಶೇ.70ಕ್ಕೂ ಅಧಿಕ ಸುಟ್ಟು ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಅನಾಹುತಕ್ಕೆ ಶಾರ್ಟ್‌ ಸರ್ಕ್ಯೂಟ್‌ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಐದು ದಿನಗಳ ಹಿಂದೆಯಷ್ಟೇ ಈ ಬಸ್ಸನ್ನು ಖರೀದಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಕೇಂದ್ರದಿಂದ ಮೃತರ ಕುಟುಂಬಗಳಿಗೆ ತಲಾ 2 ಲ.ರೂ. ಪರಿಹಾರ ಘೋಷಿಸಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಈ ದುರಂತವನ್ನು ಅತ್ಯಂತ ಹೃದಯ ವಿದ್ರಾವಕ ಎಂದು ಕರೆದಿದ್ದಾರೆ ಮತ್ತು ಸಂತ್ರಸ್ತರಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಜೈಸಲ್ಮೇರ್‌ನಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಅತ್ಯಂತ ದುರಂತ. ಈ ದುರದೃಷ್ಟಕರ ಅಪಘಾತದಿಂದ ಹಾನಿಗೊಳಗಾದ ಜನರಿಗೆ ನಾನು ನನ್ನ ಸಂತಾಪ ಸೂಚಿಸುತ್ತೇನೆ ಎಂದು ಭಜನ್ ಲಾಲ್ ಶರ್ಮಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

error: Content is protected !!
Scroll to Top