ವಿದೇಶದಲ್ಲಿದ್ದ ವ್ಯಕ್ತಿಯನ್ನು ಕರೆಸಿಕೊಂಡು ವಂಚಿಸಿದ ಪ್ರಕರಣ
ವಿಟ್ಲ : ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಮದುವೆಯಾಗಲು ಹೆಣ್ಣು ತೋರಿಸುವ ನೆಪದಲ್ಲಿ ಕರೆಸಿಕೊಂಡು ಹನಿಟ್ರ್ಯಾಪ್‌ಗೆ ಕೆಡವಿ 44.80 ಲಕ್ಷ ರೂ.ಸುಲಿಗೆ ಮಾಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಬ್ಲ್ಯಾಕ್‌ಮೇಲ್ ಮತ್ತು ಹಣಕಾಸು ವಂಚನೆಯ ಪ್ರಕರಣ ದಾಖಲಾಗಿದೆ.
53 ವರ್ಷದ ಮೊಹಮ್ಮದ್ ಅಶ್ರಫ್ ತಾವರಕಡನ್ ಎಂಬವರು 2024ರ ಸೆಪ್ಟೆಂಬರ್‌ನಲ್ಲಿ ಮಂಗಳೂರಿಗೆ ಬಂದಿದ್ದಾಗ ಹೆಣ್ಣು ತೋರಿಸುವ ನೆಪದಲ್ಲಿ ಆರೋಪಿಗಳು ಅವರನ್ನು ಭೇಟಿ ಮಾಡಿ ಸುಲಿಗೆ ಮಾಡಿದ್ದಾರೆ.
ಬಶೀರ್ ಮತ್ತು ಸಫಿಯಾ ಎಂದು ಗುರುತಿಸಲಾದ ಆರೋಪಿಗಳು ತನ್ನನ್ನು ಮಂಗಳೂರಿಗೆ ಕರೆಸಿಕೊಂಡಿದ್ದು, ವಧುವನ್ನು ಭೇಟಿಯಾಗುವ ನೆಪದಲ್ಲಿ ಕರೆಸಿಕೊಂಡಿದ್ದಾಗಿ ಅಶ್ರಫ್ ಹೇಳಿದ್ದಾರೆ. ಹೆಣ್ಣು ನೋಡುವ ನೆಪದಲ್ಲಿ ಫೋಟೋ, ವಿಡಿಯೋ ತೆಗೆದು ನಂತರ ಅವುಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ 44.80 ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾನನಷ್ಟ ಮತ್ತು ಪ್ರತಿಷ್ಠೆಗೆ ಹಾನಿಯಾಗುವ ಭಯದಿಂದ ಅಶ್ರಫ್ ಒಂದು ಒಟ್ಟು 44.80 ಲಕ್ಷ ರೂ. ಆರೋಪಿಗಳಿಗೆ ಪಾವತಿಸಿರುವುದಾಗಿ ಹೇಳಿಕೊಂಡಿದ್ದಾರೆ. ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 145/2025 ಕಲಂ: 318(4), 308(2), 115(2), 351(2), r/w 3(5) BNS-2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.
























