ಸುಳ್ಯ: ಮಾರಿಷಸ್‌ನಲ್ಲಿ ವಿದ್ಯಾರ್ಥಿ ವಿಸಾದಲ್ಲಿದ್ದ ಸುಳ್ಯದ ಯುವಕನೊಬ್ಬ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತ ಯುವಕನನ್ನು ನಂದನ್ ಎಸ್. ಭಟ್(25) ಎಂದು ಗುರುತಿಸಲಾಗಿದೆ. ಅವರು ಮಾರಿಷಸ್‌ನಲ್ಲಿ ಡಿಪ್ಲೊಮಾ ಇನ್ ಹಾಸ್ಪಿಟಾಲಿಟಿ ಆ್ಯಂಡ್ ಟೂರಿಸಂ ಅಧ್ಯಯನ ಮಾಡುತ್ತಿದ್ದರು.
ನಿನ್ನೆ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೃತದೇಹವನ್ನು ಅಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಅಲ್ಲಿನ ಸರ್ಕಾರ ಮತ್ತು ಭಾರತ ಸರ್ಕಾರದ ಸಹಾಯದಿಂದ ಸ್ವಗ್ರಾಮಕ್ಕೆ ತರಲು ಅನುಕೂಲ ಮಾಡಿಕೊಡುವಂತೆ ಮೃತ ತಾಯಿ ಜಯಲಕ್ಷ್ಮಿ ಅವರ ಸಂಬಂಧಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ಬ್ರಿಜೇಶ್ ಚೌಟ ಅವರು ಮೃತದೇಹವನ್ನು ಭಾರತಕ್ಕೆ ತರಲು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸುವಂತೆ ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ.
























