ಆದಾಯ ಸಾಕಾಗುತ್ತಿಲ್ಲ ಸಚಿವ ಸ್ಥಾನದಿಂದ ಕೈಬಿಡಿ ಎಂದು ಮನವಿ ಮಾಡಿದ ಸುರೇಶ್‌ ಗೋಪಿ!

ರಾಜಕೀಯ ವಲಯದಲ್ಲಿ ಅಚ್ಚರಿ ಹುಟ್ಟಿಸಿದ ಕೇರಳದ ಸಂಸದನ ಬಹಿರಂಗ ಹೇಳಿಕೆ

ನವದೆಹಲಿ: ಸಚಿವ ಸ್ಥಾನಕ್ಕೆ ಇನ್ನಿಲ್ಲದಂತೆ ತಿಪ್ಪರಲಾಗ ಹಾಕುವ ರಾಜಕಾರಣಿಗಳ ನಡುವೆ ಕೇರಳದ ತ್ರಿಶ್ಶೂರಿನಿಂದ ಲೋಕಸಭೆಗೆ ಆಯ್ಕೆಯಾಗಿ ಸಚಿವರಾಗಿರುವ ಚಿತ್ರನಟ ಸುರೇಶ್‌ ಗೋಪಿ ನನಗೆ ಸಚಿವ ಸ್ಥಾನ ಬೇಡ ಎಂದು ಬಹಿರಂಗವಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಕೇರಳದಲ್ಲಿ ಬಿಜೆಪಿಯಿಂದ ಲೋಕಸಭೆ ಚುನಾವಣೆ ಗೆದ್ದಿರುವ ಮೊದಲ ಸಂಸದ ಎಂಬ ಹಿರಿಮೆಯನ್ನೂ ಹೊಂದಿರುವ ಸುರೇಶ್‌ ಗೋಪಿ ಸಚಿವ ಸ್ಥಾನ ಬೇಡ ಎಂದಿರುವುದಕ್ಕೆ ನೀಡಿರುವ ಕಾರಣ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ. ಸದ್ಯ ಸುರೇಶ್‌ ಗೋಪಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವರು ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ಸಚಿವನಾದ ಬಳಿಕ ನನ್ನ ಆದಾಯ ಬಹಳಷ್ಟು ಕಡಿಮೆಯಾಗಿದೆ. ನಟನೆಯಿಂದಲೇ ನನ್ನ ಜೀವನ ನಿರ್ವಹಣೆಯಾಗಬೇಕು. ಹೀಗಾಗಿ ನಟನೆಗೆ ಮರಳಲು ಬಯಸುತ್ತೇನೆ. ಸಚಿವ ಸಂಪುಟದಿಂದ ನನ್ನನ್ನು ಕೈಬಿಟ್ಟು ರಾಜ್ಯಸಭೆಗೆ ಆಯ್ಕೆಯಾಗಿರುವ ಸದಾನಂದನ್‌ ಮಾಸ್ಟರ್‌ ಅವರನ್ನು ಸಚಿವರನ್ನಾಗಿ ಮಾಡಿದರೆ ಖುಷಿಪಡುವೆ ಎಂದು ಬಹಿರಂಗ ಸಭೆಯೊಂದರಲ್ಲಿ ಸುರೇಶ್‌ ಗೋಪಿ ಹೇಳಿರುವುದು ಈಗ ಸಖತ್‌ ವೈರಲ್‌ ಆಗಿದೆ.





















































 
 

ಕನಿಷ್ಠ ಪಂಚಾಯತ್‌ ಮೆಂಬರ್‌ ಆದವರೂ ಕೋಟಿಗಳಲ್ಲಿ ಸಂಪಾದಿಸುವ ಈ ಕಾಲದಲ್ಲಿ ಕೇಂದ್ರ ಸಚಿವರಾಗಿಯೂ ತನಗೆ ಆದಾಯ ಸಾಕಾಗುತ್ತಿಲ್ಲ ಎಂದು ಹೇಳಿರುವುದು ವಿಶೇಷ ಎಂದು ಅನೇಕರು ವ್ಯಾಖ್ಯಾನಿಸಿದ್ದಾರೆ. ಕೆಲವರು ಚುನಾವಣೆಗೆ ನಿಲ್ಲುವಾಗ, ಸಚಿವರಾಗುವಾಗ ಇದನ್ನೆಲ್ಲ ಆಲೋಚಿಸಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುರೇಶ್‌ ಗೋಪಿ, ಸಚಿವ ಹುದ್ದೆಯನ್ನು ವಹಿಸಿಕೊಂಡ ನಂತರ ತಮ್ಮ ಆದಾಯ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಹೇಳಿದರು. ನಾನು ನಿಜವಾಗಿಯೂ ನಟನೆಯನ್ನು ಮುಂದುವರಿಸಲು ಬಯಸುತ್ತೇನೆ. ನಾನು ಹೆಚ್ಚು ಗಳಿಸಬೇಕಾಗಿದೆ; ನನ್ನ ಆದಾಯ ಈಗ ಸಂಪೂರ್ಣವಾಗಿ ನಿಂತುಹೋಗಿದೆ ಎಂದು ಅವರು ಹೇಳಿದ್ದಾರೆ.

ತಾವು ರಾಜೀನಾಮೆ ಸಲ್ಲಿಸಿದ ನಂತರ ತೆರವಾಗುವ ಸಚಿವ ಸ್ಥಾನವನ್ನು ರಾಜ್ಯಸಭಾ ಸಂಸದ ಸಿ.ಸದಾನಂದನ್ ಮಾಸ್ಟರ್ ಅವರಿಗೆ ನೀಡಬೇಕೆಂದು ಮನವಿ ಮಾಡಿದ್ದಾರೆ. ನಾನು ಎಂದಿಗೂ ಸಚಿವನಾಗಬೇಕೆಂದು ಪ್ರಾರ್ಥಿಸಿಲ್ಲ. ಚುನಾವಣೆಗೆ ಒಂದು ದಿನ ಮೊದಲೂ, ನಾನು ಸಚಿವನಾಗಲು ಬಯಸುವುದಿಲ್ಲ, ನಾನು ಸಿನಿಮಾದಲ್ಲಿ ಮುಂದುವರಿಯಲು ಬಯಸುತ್ತೇನೆ ಎಂದು ವರದಿಗಾರರಿಗೆ ಹೇಳಿದ್ದೆ. ನಾನು ಅಕ್ಟೋಬರ್ 2008ರಲ್ಲಿ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡೆ. ಪಕ್ಷವು ನನ್ನ ಮೇಲೆ ಭರವಸೆ ಇಟ್ಟು ದೊಡ್ಡ ಹುದ್ದೆಯನ್ನೇ ನೀಡಿತು ಎಂದಿದ್ದಾರೆ.

ಈ ವರ್ಷದ ಆರಂಭದಲ್ಲಿ ಕಣ್ಣೂರಿನ ಬಿಜೆಪಿ ಹಿರಿಯ ನಾಯಕ ಸದಾನಂದನ್ ಮಾಸ್ಟರ್ ರಾಜ್ಯಸಭೆಗೆ ನಾಮನಿರ್ದೇಶನಗೊಂಡು ಆಯ್ಕೆಯಾಗಿದ್ದಾರೆ.

error: Content is protected !!
Scroll to Top