ಇಂದು ಸಿದ್ದರಾಮಯ್ಯ ಡಿನ್ನರ್‌ ಮೀಟ್‌ : ರಾಜಕಾರಣದಲ್ಲಿ ಭಾರಿ ಕುತೂಹಲ

ರಾಜ್ಯ ರಾಜಕೀಯದ ಭವಿಷ್ಯ ನಿರ್ಧರಿಸುತ್ತಾ ಈ ಔತಣಕೂಟ?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಡಿನ್ನರ್‌ ಮೀಟ್‌ ಇಂದು ನಡೆಯಲಿದೆ. ಸಿದ್ದರಾಮಯ್ಯನವರ ಆಪ್ತ ಸಚಿವರು ಇದರಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ರಾಜಕೀಯದ ಭವಿಷ್ಯ ಇಂದಿನ ಔತಣಕೂಟದ ಮೇಲೆ ನಿಂತಿದೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಈ ಡಿನ್ನರ್‌ ಮೀಟ್‌ ಭಾರಿ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಜೋರಾಗಿಯೇ ನಡೆಯುತ್ತಿದೆ. ಈ ನಡುವೆ ಸಿದ್ದರಾಮಯ್ಯ ಇಂದು ಸಚಿವರಿಗೆ ಔತಣಕೂಟ ಏರ್ಪಡಿಸಿದ್ದು, ಇದು ಸಂಪುಟ ಪುನಾರಚನೆಗೆ ಮುನ್ನುಡಿ ಎನ್ನಲಾಗಿದೆ. ಕಾಂಗ್ರೆಸ್ ನಾಯಕರೆಲ್ಲ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಯಾವ ಕ್ರಾಂತಿಯೂ ಇಲ್ಲ ಎಂದು ಸಾರಸಗಟಾಗಿ ತಳ್ಳಿ ಹಾಕುತ್ತಿದ್ದಾರೆ. ಆದರೆ ಶಾಸಕ ಲಕ್ಷ್ಮಣ ಸವದಿ, ಡಿಸೆಂಬರ್‌ನಲ್ಲಿ ನನಗೆ ಶುಕ್ರದೆಸೆ ಶುರುವಾಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಸಚಿವನಾಗುತ್ತೇನೆ ಎಂದಿದ್ದಾರೆ. ಈ ರೀತಿ ಅನೇಕ ಕಾಂಗ್ರೆಸ್‌ ನಾಯಕರು ಸಚಿವರಾಗಲು ತುದಿಗಾಲಲ್ಲಿ ಕಾದು ನಿಂತಿದ್ದಾರೆ. ಇಂದಿನ ಡಿನ್ನರ್‌ ಮೀಟ್‌ ಕೆಲವರಿಗೆ ಸಿದ್ದರಾಮಯ್ಯ ಕಡೆಯಿಂದ ವಿದಾಯಕೂಟವಾಗಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.





















































 
 

ಕಾಂಗ್ರೆಸ್​​​ ಒಳಗಿನ ಬೆಳವಣಿಗೆ, ಗೊಂದಲಗಳು ಪ್ರತಿಪಕ್ಷ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದೆ. ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ಅನ್ನು ಮೋಜಿನ ಸಭೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಸಿಎಂ ಮೇಲೆ ಮಾಟಮಂತ್ರ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಮುನಿರತ್ನ ಆರೋಪಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಒಂದೆಡೆ ನವೆಂಬರ್‌ನಲ್ಲಿ ಕ್ರಾಂತಿ ಆಗಲಿದೆ, ಮುಖ್ಯಮಂತ್ರಿ ಬದಲಾವಣೆಯಾಗುವುದು ಖಚಿತ ಎಂಬ ಮಾತುಗಳು ಹರಿದಾಡುತ್ತಿವೆ. ಇನ್ನೊಂದೆಡೆ ಬಿಹಾರ ಚುನಾವಣೆ ಮುಗಿದ ಬಳಿಕ ಡಿಸೆಂಬರ್‌ನಲ್ಲಿ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಅನೇಕರು ಈಗಾಗಲೇ ಸಚಿವ ಪಟ್ಟ ಗಿಟ್ಟಿಸಿಕೊಳ್ಳಲು ಲಾಬಿ ಪ್ರಾರಂಭಿಸಿದ್ದಾರೆ. ಹೀಗೆ ನಾನಾ ಕಾರಣಗಳಿಗಾಗಿ ಸಿದ್ದರಾಮಯ್ಯ ಕರೆದಿರುವ ಡಿನ್ನರ್‌ ಮೀಟ್‌ ಕುತೂಹಲ ಕೆರಳಿಸಿದೆ.

error: Content is protected !!
Scroll to Top