ಪ್ರಿಯಾಂಕ್ ಖರ್ಗೆ ಪತ್ರದ ಪರಿಣಾಮದ ಮೇಲೆ ಕಣ್ಣಿಡಲು ಸಮಿತಿ ರಚಿಸಿದ ಬಿಜೆಪಿ
ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಕಾರ್ಯಕ್ರಮ ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ ಬರೆದಿರುವುದು ಆಕ್ರೋಶದ ಕಿಡಿ ಎಬ್ಬಿಸಿದೆ. ಮಾಜಿ ಸಚಿವ ಕಾರ್ಕಳದ ಶಾಸಕ ಸುನಿಲ್ ಕುಮಾರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹಿತ ಅನೇಕ ಬಿಜೆಪಿ ಮತು ಸಂಘ ಪರಿವಾರದ ನಾಯಕರು ತಾಕತ್ ಇದ್ದರೆ ಆರ್ಎಸ್ಎಸ್ ನಿಷೇಶ ಮಾಡಿ ಎಂದು ಪ್ರಿಯಾಂಕ್ ಖರ್ಗೆಗೆ ನೇರ ಸವಾಲು ಹಾಕಿದ್ದಾರೆ.
ಶಾಲಾ-ಕಾಲೇಜು ಮೈದಾನಗಳು, ಸಾರ್ವಜನಿಕ ಪಾರ್ಕ್, ಮುಜರಾಯಿ ದೇವಸ್ಥಾನಗಳಲ್ಲಿ ಆರ್ಎಸ್ಎಸ್ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು. ಈ ಸಂಬಂಧ ಕಾನೂನು ರೂಪಿಸಬೇಕು ಎಂದು ಅ.4ರಂದು ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಪತ್ರ ಭಾನುವಾರ ಬಹಿರಂಗವಾಗಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಪತ್ರಕ್ಕೆ ಸ್ಪಂದಿಸಿರುವ ಸಿದ್ದರಾಮಯ್ಯ ಪರಿಶೀಲಿಸಿ ಕೂಡಲೆ ಅಗತ್ಯ ಕ್ರಮ ವಹಿಸಿ ಎಂದು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಆರ್ಎಸ್ಎಸ್ಗೂ ತಾಲಿಬಾನ್ಗೂ ಏನೂ ವ್ಯತ್ಯಾಸ ಇಲ್ಲ. ಸರ್ಕಾರಿ ಶಾಲೆಯಲ್ಲಿ ಬೈಠಕ್ ಆಗಬಾರದು. ನಮ್ಮದು ಬಸವ ತತ್ವದ ಮೇಲೆ ನಡೆಯುವ ಸರ್ಕಾರ ಅಂದಿದ್ದಾರೆ.
ಈ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ ಪ್ರಿಯಾಂಕ್ ಖರ್ಗೆ ಪತ್ರದ ಪರಿಣಾಮಗಳ ಮೇಲೆ ನಿಗಾ ಇಡಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಪ್ರಿಯಾಂಕ್ ಖರ್ಗೆ ಪತ್ರದ ಸಾಧಕ ಬಾಧಕಗಳ ಅಧ್ಯಯನ ನಡೆಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಮೂವರು ಸದಸ್ಯರ ಸಮಿತಿ ರಚಿಸಿ ನಿರ್ಣಯ ಕೈಗೊಳ್ಳಲಾಗಿದೆ.
ಎಂಎಲ್ಸಿಗಳಾದ ಎನ್. ರವಿಕುಮಾರ್, ಕೆ.ಎಸ್ ನವೀನ್ ಅವರನ್ನೊಳಗೊಂಡ ಮೂವರ ಸಮಿತಿ ರಚಿಸಲಾಗಿದ್ದು, ಸಂಘದ ಚಟುವಟಿಕೆಗಳ ನಿಷೇಧ ಪ್ರಸ್ತಾಪದ ಸಾಧಕ ಬಾಧಕಗಳ ಅಧ್ಯಯನಕ್ಕೆ ಸೂಚಿಸಲಾಗಿದೆ. ಸರ್ಕಾರದ ಮುಂದಿನ ನಡೆಯ ಮೇಲೆ ಈ ಸಮಿತಿ ಸದಾ ನಿಗಾ ಇಡಲಿದೆ. ಒಂದೊಮ್ಮೆ ಸರ್ಕಾರ ನಿಷೇಧ ತೀರ್ಮಾನ ಮಾಡಿದರೆ ಅದರಿಂದಾಗುವ ಪರಿಣಾಮಗಳ ಅಧ್ಯಯನ ಮಾಡಲಿದೆ.
ಸರ್ಕಾರಿ ಮತ್ತು ಅನುದಾನಿತ ಶಾಲಾ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಚಟುವಟಿಕೆಗಳು ಹಾಗೂ ಶಾಖೆ ನಡೆಸಲು ಅನುಮತಿ ನೀಡಬಾರದು ಎಂದು ಪ್ರಿಯಾಂಕ್ ಖರ್ಗೆ ಈ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಸರ್ಕಾರಿ ಶಾಲಾ ಕಾಲೇಜುಗಳ ಆವರಣ, ಉದ್ಯಾನವನ, ಸರ್ಕಾರಿ ಮೈದಾನ ಮತ್ತು ಹಾಸ್ಟೆಲ್ ಕ್ಯಾಂಪಸ್ನಲ್ಲಿ ಆರ್ಎಸ್ಎಸ್ ಚಟುವಟಿಕೆ ನಿರ್ಬಂಧಿಸಲು ಆಗ್ರಹಿಸಲಾಗಿದೆ.
ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲಭೂತ ತತ್ವಗಳನ್ನೊಳಗೊಂಡ ಸಂವಿಧಾನವು ನಮಗೆ ಅಧಿಕಾರವನ್ನು ನೀಡುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಹೆಸರಿನ ಸಂಘಟನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಾ ಘೋಷಣೆಗಳನ್ನು ಕೂಗುತ್ತಾ ಮಕ್ಕಳು ಮತ್ತು ಯುವ ಸಮುದಾಯದ ಮನಸ್ಸಿನಲ್ಲಿ ಭಾರತ ಐಕ್ಯತೆಯ ವಿರುದ್ಧವಾಗಿ ಹಾಗೂ ಸಂವಿಧಾನದ ಆಶಯಗಳ ವಿರುದ್ಧವಾಗಿ ನಕರಾತ್ಮಕ ಆಲೋಚನೆಗಳನ್ನು ತುಂಬುತ್ತಿದೆ.
ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುವ ಮೂಲಕ ಮುಗ್ಢ ಮಕ್ಕಳು ಹಾಗೂ ಯುವಜನರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ. ನಾಡಿನ ಮಕ್ಕಳು, ಯುವ ಸಮುದಾಯ, ಸಾರ್ವಜನಿಕರು ಮತ್ತು ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಸಂಘಟನೆಯ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ಪ್ರಿಯಾಂಕ್ ಖರ್ಗೆ ಉಲ್ಲೇಖಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಕುರಿತಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ಎನ್ನಲಾಗಿದೆ. ಈ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ರಾಜಕೀಯ ಕಿತ್ತಾಟ ಜೋರಾಗಿದೆ.
ಇನ್ನು ಸಿಎಂಗೆ ಪತ್ರದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಧರ್ಮ ರಕ್ಷಣೆ, ಗೋರಕ್ಷಣೆ ಹೆಸರಿನಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಧರ್ಮ ರಕ್ಷಣೆ, ಗೋರಕ್ಷಣೆ ತತ್ವ ಸಿದ್ಧಾಂತ ಬಡವರ ಮಕ್ಕಳಿಗೆ ಯಾಕೆ? ಇತ್ತೀಚೆಗೆ ಬಿಜೆಪಿಯ ದೊಡ್ಡ ನಾಯಕರು ಗಣವೇಷ ಹಾಕುತ್ತಿದ್ದಾರೆ. ಮೊದಲೆಲ್ಲ ಬಿಜೆಪಿಯ ದೊಡ್ಡ ನಾಯಕರು ಗಣವೇಷ ಹಾಕ್ತಿರಲಿಲ್ಲ. ಬಿಜೆಪಿ ನಾಯಕರ ಮಕ್ಕಳು ಎಲ್ಲಿದ್ದಾರೆ? ಅವರು ಯಾಕೆ ಗಣವೇಷ ಹಾಕಲ್ಲ. ಈ ಸಿದ್ಧಾಂತ ಕೇವಲ ಬಡವರು, ಹಿಂದುಳಿದವರಿಗೆ ಮಾತ್ರ ಯಾಕೆ ಎಂದು ಪ್ರಶ್ನಿಸಿದ್ದಾರೆ.
























