ರಾಜ್ಯದಲ್ಲಿ ಮದ್ಯ ಮಾರಾಟ ಭಾರಿ ಇಳಿಮುಖ

ಮದ್ಯ ಶೇ.15, ಬಿಯರ್‌ ಶೇ.19ರಷ್ಟು ಮಾರಾಟ ಕುಸಿತ

ಬೆಂಗಳೂರು : ಕರ್ನಾಟಕದಲ್ಲಿ ಮದ್ಯ ಮಾರಾಟ ಪ್ರಮಾಣ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಸರ್ಕಾರ ಮೂರ್ನಾಲ್ಕು ಬಾರಿ ಮದ್ಯದ ಬೆಲೆ ಹೆಚ್ಚಳ ಮಾಡಿರುವುದು ಎನ್ನಲಾಗಿದೆ. ಕಳೆದ ಆರು ತಿಂಗಳಿನಿಂದ ಮದ್ಯ ಮಾರಾಟದ ಮೇಲೆ ಹೊಡೆತ ಬಿದ್ದಿದ್ದು, ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಈ ವರ್ಷ ವ್ಯಾಪಾರ ಕುಸಿದಿದೆ. ಅಬಕಾರಿ ಇಲಾಖೆಯ ಅರ್ಧ ವಾರ್ಷಿಕ ವಹಿವಾಟಿನ ಅಂಕಿಅಂಶ ಪ್ರಕಾರ ರಾಜ್ಯದಲ್ಲಿ ಮದ್ಯ ಮಾರಾಟ ಚೇತರಿಕೆ ಕಂಡಿಲ್ಲ. 2023, 2024ಕ್ಕೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಳ ಇದಕ್ಕೆ ಪ್ರಮುಖ ಕಾರಣ ಎಂದು ಮದ್ಯ ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

2023ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 352.83 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದ್ದರೆ, 2024ರ ಅದೇ ಅವಧಿಯಲ್ಲಿ 345.76 ಲಕ್ಷ ಬಾಕ್ಸ್​ಗೆ ಇಳಿಕೆಯಾಗಿತ್ತು. 2025ರಲ್ಲಿ 342.93 ಲಕ್ಷ ಬಾಕ್ಸ್ ಮಾರಾಟವಾಗಿದೆ. ಕಳೆದ ಸಾಲಿಗೆ ಹೋಲಿಕೆ ಮಾಡಿದರೆ 2.83 ಲಕ್ಷ ಬಾಕ್ಸ್ ವ್ಯಾಪಾರ ಇಳಿಕೆಯಾಗಿದೆ. ಈ ಬಗ್ಗೆ ಮದ್ಯ ಮಾರಾಟಗಾರರು ಪ್ರತಿಕ್ರಿಯಿಸಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.15ರಿಂದ 20 ರಷ್ಟು ಮದ್ಯ ಮಾರಾಟ ಕಡಿಮೆ ಆಗಿದೆ ಎಂದಿದ್ದಾರೆ.





















































 
 

2024ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 242.73 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಆದರೆ 2025ರ ಇದೇ ಅವಧಿಯಲ್ಲಿ 195.27 ಲಕ್ಷ ಬಾಕ್ಸ್ ಮಾರಾಟವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 47.46 ಲಕ್ಷ ಬಾಕ್ಸ್ ವ್ಯಾಪಾರ ಇಳಿಕೆ ಆಗಿದ್ದು, ಶೇ.19.55ರಷ್ಟು ಕಡಿಮೆ ಆಗಿದೆ. ಪ್ರತಿ ತಿಂಗಳಿನಲ್ಲೂ ಬಿಯರ್ ಮಾರಾಟ ಕಡಿಮೆ ಆಗುತ್ತಲೇ ಇದೆ.

error: Content is protected !!
Scroll to Top