ಬೆಂಗಳೂರು: ಬೆಂಗಳೂರಿನ ಎನ್‌ಸಿಬಿ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಅಂತಾರಾಷ್ಟ್ರೀಯ ಡ್ರಗ್ಸ್ ಜಾಲವೊಂದನ್ನು ಬಯಲಿಗೆಳೆದಿದ್ದಾರೆ. ಮೂವರು ಆರೋಪಿಗಳನ್ನ ಎನ್‌ಸಿಬಿ ಬಂಧಿಸಿದೆ. ಬಂಧಿತರಿಂದ ಒಟ್ಟು 45 ಕೆ ಜಿ ಹೈಡ್ರೋಗಾಂಜಾ, 6 ಕೆಜಿ ಸೈಲೋಸಿಬಿನ್ ಅಣಬೆಯನ್ನು ಜಪ್ತಿ ಮಾಡಲಾಗಿದೆ.
ಥೈಲ್ಯಾಂಡ್‌ನಿಂದ ಡ್ರಗ್ಸ್ ಸಾಗಾಟ ಮಾಡುತ್ತಿರುವುದಾಗಿ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಕೊಲಂಬೋದಿಂದ ಬರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 31 ಕೆಜಿ ಹೈಡ್ರೋಗಾಂಜಾ, 4 ಕೆಜಿ ಸೈಲೋಸಿಬಿನ್ ಅಣಬೆ ಜಪ್ತಿ ಮಾಡಿದ್ದರು. ಇವರಿಬ್ಬರ ವಿಚಾರಣೆ ವೇಳೆ ಮುಂದಿನ ಫ್ಲೈಟ್‌ನಲ್ಲಿ ಹ್ಯಾಂಡ್ಲರ್ ಶ್ರೀಲಂಕಾದಿಂದ ಬರುವ ಮಾಹಿತಿ ಸಿಕ್ಕಿತ್ತು. ಅದರಂತೆ ಕಾದು ಕುಳಿತಿದ್ದ ಅಧಿಕಾರಿಗಳು ಶ್ರೀಲಂಕಾದ ಪ್ರಜೆಯನ್ನೂ ಬಂಧಿಸಿ ಆತನ ಬಳಿಯಿದ್ದ 14 ಕೆಜಿ ಹೈಡ್ರೋಗಾಂಜಾ, 2 ಕೆಜಿ ಅಣಬೆಯನ್ನು ಜಪ್ತಿ ಮಾಡಿದರು. ಆರೋಪಿಗಳು ಒಟ್ಟು 250 ಫುಡ್ ಟಿನ್‌ಗಳಲ್ಲಿ ಡ್ರಗ್ಸ್ ಸೀಲ್ ಮಾಡಿಕೊಂಡು ಬಂದಿದ್ದರು.

