ಗಡಿ ಭಾಗದ ದೇಶಗಳಲ್ಲಿ ಯುದ್ಧದ ಕಾರ್ಮೋಡ
ಕಾಬೂಲ್: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ದಾಳಿ ಮತ್ತು ಪ್ರತಿದಾಳಿ ನಡೆಸಲಾರಂಭಿಸಿದ್ದು, ಜಗತ್ತಿನಲ್ಲಿ ಇನ್ನೊಂದು ಯುದ್ಧದ ಕಾರ್ಮೋಡ ಕವಿದಿದೆ. ಕಾಬೂಲ್ ಮೇಲೆ ವಾಯುದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ತಾಲಿಬಾನ್ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಮತ್ತೊಂದು ಸುತ್ತಿನ ಕ್ಷಿಪಣಿ ದಾಳಿ ನಡೆಸಿದೆ.
ಅಫ್ಘಾನ್- ಪಾಕ್ ಗಡಿಯಾಗಿರುವ ಡುರಾಂಡ್ ಲೈನ್ನಲ್ಲಿ ನಡೆದ ಘರ್ಷಣೆಯಲ್ಲಿ 12 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಸೇನೆ ಗಡಿಯಲ್ಲಿ ಸ್ಥಾಪಿಸಿದ್ದ 12 ಔಟ್ಪೋಸ್ಟಿಂಗ್ಗಳನ್ನ ಅಫಘಾನಿಸ್ತಾನ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಕುನಾರ್ ಮತ್ತು ಹೆಲ್ಮಂಡ್ ಪ್ರಾಂತ್ಯಗಳಲ್ಲಿ ಡುರಾಂಡ್ ರೇಖೆಯಾದ್ಯಂತ ಪಾಕಿಸ್ತಾನಿ ಸೇನೆಯ ಹಲವಾರು ಹೊರಠಾಣೆಗಳನ್ನು ತಾಲಿಬಾನ್ ಪಡೆಗಳು ವಶಪಡಿಸಿಕೊಂಡಿವೆ ಎಂದು ಅಫ್ಘಾನ್ ರಕ್ಷಣಾ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 9ರಂದು ಪಾಕಿಸ್ತಾನ ಅಫ್ಘಾನಿಸ್ತಾನದ ಪೂರ್ವ ಪ್ರಾಂತ್ಯಗಳಲ್ಲಿ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹಿರಿಯ ಕಮಾಂಡರ್ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಈ ವಾಯುದಾಳಿಗಳಿಗೆ ಪ್ರತಿಕ್ರಿಯೆಯಾಗಿ ಅಫ್ಘಾನ್ ಪಡೆಗಳು ಡುರಾಂಡ್ ರೇಖೆಯ ಬಳಿಯ ಪಾಕಿಸ್ತಾನಿ ಮಿಲಿಟರಿ ಪೋಸ್ಟ್ಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸುತ್ತಿವೆ.
ಎರಡೂ ಮುಸ್ಲಿಮ್ ರಾಷ್ಟ್ರಗಳು ಘರ್ಷಣೆಯಲ್ಲಿ ತೊಡಗಿದ ಬೆನ್ನಲ್ಲೇ ಸೌದಿ ಅರೇಬಿಯಾ, ಕತಾರ್ ದೇಶಗಳು ಘರ್ಷಣೆಯನ್ನು ನಿಲ್ಲಿಸುವಂತೆ ಎರಡೂ ದೇಶಗಳ ಜೊತೆ ಮನವಿ ಮಾಡಿದೆ.
























