ದೈವ ಆವೇಶದ ರೀಲ್ಸ್‌ಗಳಿಂದ ಪಾವಿತ್ರ್ಯಕ್ಕೆ ಅಪಚಾರ ಎಂದು ಕಳವಳ
ಮಂಗಳೂರು: ಕಾಂತಾರಾ ಚಿತ್ರದಲ್ಲಿದ್ದಂತೆ ಈಗ ಕಾಂತಾರ ಅಧ್ಯಾಯ 1ರಲ್ಲೂ ದೈವಾರಾಧನೆ ಮತ್ತು ದೈವದ ಆವೇಶವನ್ನು ತೋರಿಸಿರುವುದಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿಯವರ ಮೇಲೆ ದೈವಾರಾಧಾಕರು ಅಸಮಾಧಾನಗೊಂಡಿದ್ದಾರೆ. ತೆರೆಯ ಮೇಲೆ ದೈವದ ಆವೇಶವನ್ನು ನೋಡಿದ ಕೆಲವರು ಪುಕ್ಕಟೆ ಪ್ರಚಾರಕ್ಕಾಗಿ ಅದೇ ರೀತಿ ಆವೇಶದ ಅಭಿನಯ ಮಾಡಿ ರೀಲ್ಸ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿರುವುದು ಹೆಚ್ಚಾಗುತ್ತಿದೆ. ಇದರಿಂದ ದೈವಾರಾಧನೆಯ ಪಾವಿತ್ರ್ಯಕ್ಕೆ ಅಪಚಾರವಾಗುತ್ತಿದೆ ಎಂದು ದೈವಾರಾಧಾಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇದೀಗ ದೈವದ ಮೊರೆ ಹೋಗಲು ಆರಾಧಕರು ನಿರ್ಣಯಿಸಿದ್ದಾರೆ.
ಸಿನಿಮಾದಲ್ಲಿ ದೈವಾರಾಧನೆಯನ್ನು ಬಳಕೆ ಮಾಡಿರುವುದಕ್ಕೆ ಹಾಗೂ ಪಂಜುರ್ಲಿ, ಗುಳಿಗ ಮತ್ತು ಪಿಲಿ ದೈವಗಳ ಬಳಕೆ ಮಾಡಿರುವುದಕ್ಕೆ, ದೈವದ ಆವೇಶ ಮತ್ತು ದೈವ ನರ್ತನದ ಬಳಕೆಯ ಬಗ್ಗೆ ದೈವಾರಾಧಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೈವಾರಾಧಕರು ಸಿನಿಮಾದ ವಿರುದ್ಧ ದೈವಸ್ಥಾನಗಳಲ್ಲಿ ದೂರು ನೀಡಿ ದೈವದ ಅಪಹಾಸ್ಯ, ಅನುಕರಣೆ ಮಾಡುವವರ ವಿರುದ್ಧ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಿದ್ದಾರೆ.
ಮಂಗಳೂರಿನ ಹೊರವಲಯದ ಬಜಪೆ, ಪೆರಾರ, ಬ್ರಹ್ಮ ಬಲಾಂಡಿ, ಪಿಲಿಚಂಡಿ ದೈವಸ್ಥಾನಗಳಲ್ಲಿ ದೈವ ನರ್ತಕರು, ದೈವಾರಾಧಕರಿಂದ ಇಂದು ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ದೈವದ ಎದುರು ಸಿನಿಮಾ ಬಗ್ಗೆ ದೂರು ಸಲ್ಲಿಸಲಾಗುತ್ತಿದೆ ಹಾಗೂ ದೈವದ ಅನುಕರಣೆ, ಅಪಹಾಸ್ಯ, ವ್ಯಂಗ್ಯ ಮಾಡುವವರ ವಿರುದ್ಧವೂ ದೂರು ಸಲ್ಲಿಕೆ ಆಗಲಿದೆ. ದೈವದ ಬಳಿ ದೂರು ನೀಡುವುದು ಕರಾವಳಿ ಭಾಗದಲ್ಲಿ ನಡೆದುಕೊಂಡು ಬಂದಿರುವ ನಂಬಿಕೆಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ‘ಕಾಂತಾರ ಅಧ್ಯಾಯ 1’ ಸಿನಿಮಾ ನೋಡಿ ದೈವದ ಅನುಕರಣೆ ಮಾಡುತ್ತಿದ್ದಾರೆ ಅದು ತಪ್ಪು ಎಂದು ಹೇಳುತ್ತಿರುವವರು, ಸಿನಿಮಾನಲ್ಲಿ ರಿಷಬ್ ಶೆಟ್ಟಿ ದೈವದ ಅನುಕರಣೆ ಮಾಡಿದ್ದು ತಪ್ಪು ಎನಿಸಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಸಿನಿಮಾಗಳು ಹುಟ್ಟಿದ್ದು ಈಗ ಆದರೆ ಸೂರ್ಯ-ಚಂದ್ರರ ಹುಟ್ಟಿನಿಂದಲೂ ನಮ್ಮ ಹಿರಿಯರು ದೈವದ ಆರಾಧನೆ ಮಾಡುತ್ತಲೇ ಬರುತ್ತಿದ್ದಾರೆ. ಸಿನಿಮಾಗಳಿಂದ ದೈವದ ಆರಾಧನೆಗೆ ಮಹತ್ವ ಸಿಕ್ಕಿತೆಂಬುದು ಸುಳ್ಳು ಎಂದು ಕೆಲವರು ದೈವಾರಾಧನೆಯ ಮಹತ್ವವವನ್ನು ಹೇಳಿದ್ದಾರೆ. ‘ಕಾಂತಾರ’ ಸಿನಿಮಾ ಏನೋ ಕೋಟಿ ಕೋಟಿ ಹಣ ಗಳಿಸಿತು, ಆದರೆ ಕೋಟ್ಯಂತರ ಭಕ್ತರ ಭಕ್ತಿ ಮಾರಾಟವಾಯ್ತು ಎಂದು ವ್ಯಂಗ್ಯವಾಡಿದ್ದಾರೆ.
ರಿಷಬ್ ಶೆಟ್ಟಿ, ಹೊಂಬಾಳೆ ಫಿಲಮ್ಸ್, ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆದಾಗಿನಿಂದಲೂ, ದೈವದ ಅನುಕರಣೆ ಮಾಡಬೇಡಿ ಎಂದು ಮನವಿ ಮಾಡುತ್ತಲೇ ಇದೆ. ಆದರೆ ಸಿನಿಮಾ ನೋಡಲು ಹೋದವರು ದೈವ ಮೈಮೇಲೆ ಬಂದವರಂತೆ ಆಡುವುದು, ತಮಾಷೆಗಾಗಿ, ಸೋಷಿಯಲ್ ಮೀಡಿಯಾಕ್ಕಾಗಿ ದೈವದ ಅನುಕರಣೆ ಮಾಡುವುದು, ದೈವದ ರೀತಿ ವೇಷ ತೊಡುವುದು ಮಾಡುತ್ತಲೇ ಇದ್ದಾರೆ.
























