ಗಣೇಶೋತ್ಸವದಲ್ಲಿ ಹೈಕೋರ್ಟ್ ಷರತ್ತು ಉಲ್ಲಂಘಿಸಿದ ಆರೋಪ
ಬೆಂಗಳೂರು: ಆದೇಶ ಉಲ್ಲಂಘನೆ ಆರೋಪ ಎದುರಿಸುತ್ತಿದ್ದ ವಿಶ್ವ ಹಿಂದೂ ಪರಿಷತ್ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ಗೆ ಹೈಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ. ಇದರಲ್ಲಿ ರಾಜ್ಯ ಲೀಗಲ್ ಸರ್ವೀಸ್ ಅಥಾರಿಟಿಗೆ 1 ಲಕ್ಷ ರೂ. ಮತ್ತು ಪೋಲಿಸ್ ಕ್ಷೇಮಾಭಿವೃದ್ಧಿ ನಿಧಿಗೆ 1 ಲಕ್ಷ ರೂ ನೀಡಲು ಬುಧವಾರ ಕೋರ್ಟ್ ಆದೇಶ ನೀಡಿದೆ.
ಇತ್ತೀಚೆಗೆ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನಲೆ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ಶರಣ್ ಪಂಪ್ವೆಲ್ಗೆ ನಿರ್ಬಂಧ ವಿಧಿಸಿತ್ತು. ಈ ನಿರ್ಬಂಧ ಪ್ರಶ್ನಸಿ ಶರಣ್ ಪಂಪ್ವೆಲ್ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಕೆಲ ಷರತ್ತು ವಿಧಿಸಿ ಜಿಲ್ಲಾಡಳಿತದ ನಿರ್ಬಂಧವನ್ನು ಹೈಕೋರ್ಟ್ ತೆರವುಗೊಳಿಸಿತ್ತು.
ಸೆ.13ರಂದು ಮಹಾಗಣಪತಿ ಶೋಭಾಯಾತ್ರೆ ವೇಳೆ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಅಂದು ಬೆಳಗ್ಗೆ 10.30ರಿಂದ 12:30ರವರೆಗೆ ದರ್ಶನಕ್ಕೆ ಕೋರ್ಟ್ ಅವಕಾಶ ಕಲ್ಪಿಸಿತ್ತು. ಆದರೆ ಶರಣ್ ಪಂಪ್ವೆಲ್ 12.45ರವರೆಗೆ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಅಲ್ಲದೆ ಶೋಭಾಯಾತ್ರೆಯಲ್ಲಿ ಭಾಷಣ ಕೂಡ ಮಾಡಿದ್ದರು. ಇದರಿಂದ ಆದೇಶ ಉಲ್ಲಂಘನೆ ಆಗಿದೆ ಎಂದು ಪೊಲೀಸರು ಹೈಕೋರ್ಟ್ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಆದೇಶ ಉಲ್ಲಂಘಿಸಿದ್ದಕ್ಕೆ ಹೈಕೋರ್ಟ್ ದಂಡ ವಿಧಿಸಿ ಆದೇಶ ಹೊರಡಿಸಿದೆ.
























