ಕೋಲ್ಟ್ರಿಫ್ ಕೆಮ್ಮಿನ ಸಿರಪ್ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳ ಸಾವು
ನವದೆಹಲಿ: ಹಲವು ಮಕ್ಕಳ ಸಾವಿಗೆ ಕಾರಣವಾಗಿರುವ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಿಸಿದ ಕಂಪನಿಯ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿ ಈ ಸಿರಪ್ ತಯಾರಿಸಿದ್ದು, ಕಂಪನಿಯ ಮಾಲಕ ಎಸ್. ರಂಗನಾಥನ್ ಅವರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶ ಮತ್ತು ತಮಿಳುನಾಡು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಂಗನಾಥನ್ ಅವರನ್ನು ಚೆನ್ನೈಯಲ್ಲಿ ಬಂಧಿಸಲಾಯಿತು. ಬುಧವಾರ ರಾತ್ರಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಮಧ್ಯಪ್ರದೇಶದ ಛಿಂದ್ವಾರಾ ಪೊಲೀಸರು ರಂಗನಾಥನ್ ಅವರನ್ನು ಹಿಡಿದುಕೊಟ್ಟವರಿಗೆ 20 ಸಾವಿರ ರೂ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಅವರ ಬಂಧನವಾಗಿದೆ. ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್‌ನಿಂದ ಮಕ್ಕಳ ಸಾವಿನ ಸಂಖ್ಯೆ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಇನ್ನೂ ಮೂರು ಮಕ್ಕಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 20ಕ್ಕೆ ತಲುಪಿದೆ. ಐದು ಮಕ್ಕಳು ನಾಗ್ಪುರದಲ್ಲಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈದ್ಯಕೀಯ ಪರೀಕ್ಷೆಗಳು ಸಿರಪ್‌ನಲ್ಲಿ ವಿಷಕಾರಿ ರಾಸಾಯನಿಕಗಳಿರುವುದನ್ನು ದೃಢಪಡಿಸಿವೆ. ಅದು ದೇಹಕ್ಕೆ ಪ್ರವೇಶಿಸಿದಾಗ ಮೂತ್ರಪಿಂಡಗಳಿಗೆ ಹಾನಿಯಾಗುತ್ತಿತ್ತು. ಅದಕ್ಕಾಗಿಯೇ ಅನೇಕ ಮಕ್ಕಳು ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಈ ಕೆಮ್ಮಿನ ಸಿರಪ್ ಶಿಫಾರಸ್ಸು ಮಾಡಿದ ವೈದ್ಯನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ
ಈ ನಡುವೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಔಷಧ ನಿಯಂತ್ರಕರಿಗೆ ಕಟ್ಟುನಿಟ್ಟಿನ ಸಲಹೆಗಳನ್ನು ನೀಡಿದೆ. ಪ್ರತಿಯೊಂದು ಬ್ಯಾಚ್ ಕಚ್ಚಾವಸ್ತುವನ್ನು ಬಳಕೆ ಅಥವಾ ಮಾರಾಟ ಮಾಡುವ ಮೊದಲು ಸರಿಯಾಗಿ ಪರೀಕ್ಷಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸೂಚನೆ ನೀಡಿದೆ.
ಭಾರತದ ಔಷಧ ನಿಯಂತ್ರಕ ಜನರಲ್ (DCGI) ಡಾ. ರಾಜೀವ್ ಸಿಂಗ್ ರಘುವಂಶಿ ಅವರು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕರಿಗೆ ಈ ಸಂದೇಶವನ್ನು ಕಳುಹಿಸಿದ್ದಾರೆ. ಇಂತಹ ಕಡ್ಡಾಯ ತಪಾಸಣೆಗಳನ್ನು ಮೊದಲೇ ಕಟ್ಟುನಿಟ್ಟಾಗಿ ಪಾಲಿಸಿದ್ದರೆ, ಕಲುಷಿತ ಕೆಮ್ಮಿನ ಸಿರಪ್‌ಗಳಿಗೆ ಸಂಬಂಧಿಸಿದ ಸರಣಿ ಮಕ್ಕಳ ಸಾವುಗಳನ್ನು ತಡೆಯಬಹುದಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಸಿರಪ್‌ಗಳಲ್ಲಿ ಡೈಥಿಲೀನ್ ಗ್ಲೈಕಾಲ್ (DEG) ಮತ್ತು ಎಥಿಲೀನ್ ಗ್ಲೈಕಾಲ್ (EG)ನಂತಹ ವಿಷಕಾರಿ ಕೈಗಾರಿಕಾ ದ್ರಾವಕಗಳಿರುವುದರಿಂದ ಇವುಗಳ ಉತ್ಪಾದನೆಗೆ ಮೊದಲು ಕಚ್ಚಾವಸ್ತುಗಳನ್ನು ಪರೀಕ್ಷಿಸಲು ವಿಫಲವಾಗಿರುವುದು ಸ್ಪಷ್ಟವಾಗಿದೆ ಎಂದು ತನಿಖೆಗಳು ಬಹಿರಂಗಪಡಿಸಿವೆ.
ರಾಜ್ಯ ನಿಯಂತ್ರಕರು ತಪಾಸಣೆಗಳನ್ನು ತೀವ್ರಗೊಳಿಸಬೇಕು ಮತ್ತು ಸರಿಯಾದ ಪರೀಕ್ಷೆಯಿಲ್ಲದೆ ಯಾವುದೇ ಬ್ಯಾಚ್ ಔಷಧ ಬಿಡುಗಡೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
























