ಉಪಮುಖ್ಯಮಂತ್ರಿ ಡಿಕೆಶಿ ನಿರ್ದೇಶನದಂತೆ ರಿಯಾಲಿಟಿ ಶೋ ಮುಂದುವರಿಸಲು ಅನುಮತಿ
ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶದಂತೆ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೊಗೆ ಹಾಕಿದ್ದ ಬೀಗ ತೆಗೆದಿದ್ದು, ಇದರಿಂದಾಗಿ ಜನಪ್ರಿಯ ಬಿಗ್ಬಾಸ್ ರಿಯಾಲಿಟಿ ಶೋ ಮರಳಿ ಶುರುವಾಗಿದೆ. ನಿನ್ನೆ ರಾತ್ರಿಯೇ ರೆಸಾರ್ಟ್ನಲ್ಲಿದ್ದ ಎಲ್ಲ ಸ್ಪರ್ಧಿಗಳು ಮರಳಿ ಬಿಗ್ಬಾಸ್ ಮನೆಗೆ ಬಂದಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಡಿಕೆಶಿ, ಬಿಗ್ಬಾಸ್ ಕನ್ನಡ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಆವರಣದ ಸೀಲ್ ತೆಗೆದುಹಾಕಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಾನು ನಿರ್ದೇಶನ ನೀಡಿದ್ದೇನೆ. ಪರಿಸರ ಕಾನೂನು ಅನುಸರಣೆ ಪ್ರಮುಖ ಆದ್ಯತೆಯಾಗಿದ್ದರೂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಲು ಸ್ಟುಡಿಯೋಗೆ ಸಮಯ ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು.
ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ, ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ನಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಜಾಲಿವುಡ್ ಸ್ಟುಡಿಯೋಕ್ಕೆ ಅಧಿಕಾರಿಗಳು ಬೀಗ ಹಾಕಿದ್ದ ಕಾರಣಕ್ಕೆ ಬಿಗ್ಬಾಸ್ ಕನ್ನಡ ಶೋ ಅನ್ನು ಸಹ ನಿಲ್ಲಿಸಲಾಗಿತ್ತು. ಬಿಗ್ಬಾಸ್ ಕನ್ನಡ ಸೀಸನ್ 12ರ ಎಲ್ಲ ಸ್ಪರ್ಧಿಗಳನ್ನು ಬಿಗ್ಬಾಸ್ ಮನೆಯಿಂದ ಹೊರಗೆ ಕರೆತಂದು ಈಗಲ್ಟನ್ ರೆಸಾರ್ಟ್ನಲ್ಲಿ ಇರಿಸಲಾಗಿತ್ತು. ಬಿಗ್ಬಾಸ್ ಆಯೋಜಕರು, ಜಾಲಿವುಡ್ ರೆಸಾರ್ಟ್ನ ಅಧಿಕಾರಿಗಳು, ಕಿಚ್ಚ ಸುದೀಪ್ ಇನ್ನೂ ಕೆಲವರ ಪ್ರಯತ್ನದಿಂದಾಗಿ ಬಿಗ್ಬಾಸ್ ಶೋ ಪ್ರಾರಂಭಕ್ಕೆ ಅನುಮತಿ ನೀಡಲಾಗಿದೆ. ಅದರ ಬೆನ್ನಲ್ಲೆ ಎಲ್ಲ 17 ಸ್ಪರ್ಧಿಗಳನ್ನು ಮತ್ತೆ ಬಿಗ್ಬಾಸ್ ಮನೆಗೆ ಕಳಿಸಲಾಗಿದೆ.
ಜಾಲಿವುಡ್ ಸ್ಟುಡಿಯೋ ಉಲ್ಲಂಘಿಸಿರುವ ಮಾಲಿನ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಸರಿಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು 10 ದಿನಗಳ ಕಾಲಾವಕಾಶ ನೀಡಿದ್ದಾರೆ. ಹಾಗೂ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು, ಜಾಲಿವುಡ್ ಸ್ಟುಡಿಯೋಕ್ಕೆ ಬೀಗ ಹಾಕಿರುವುದಕ್ಕೂ ಬಿಗ್ಬಾಸ್ ಶೋಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಅದರ ಬೆನ್ನಲ್ಲೆ ಬಿಗ್ಬಾಸ್ ಶೋ ನಡೆಸಲು ಅನುಮತಿ ದೊರೆತಿದ್ದು ಮುಖ್ಯ ದ್ವಾರವನ್ನಲ್ಲದೆ ಜಾಲಿವುಡ್ ಸ್ಟುಡಿಯೋಸ್ನ ಸಿ ಗೇಟ್ ಮಾತ್ರ ಓಪನ್ ಮಾಡಿಸಿ ಬಿಗ್ಬಾಸ್ ಸಿಬ್ಬಂದಿ ಮತ್ತು ಸ್ಪರ್ಧಿಗಳನ್ನು ಒಳಗೆ ಬಿಟ್ಟಿದ್ದಾರೆ.
ಬಿಗ್ಬಾಸ್ ಶೋ ರದ್ದಾದ ಬೆನ್ನಿಗೆ ಕೆಲತಿಂಗಳ ಹಿಂದೆ ಡಿಕೆಶಿ ಕನ್ನಡ ಚಿತ್ರರಂಗದವರ ನಟ್ ಬೋಲ್ಟ್ ಟೈಟ್ ಮಾಡುತ್ತೇನೆ ಎಂದು ಹೇಳಿದ್ದ ಹೇಳಿಕೆ ವೈರಲ್ ಆಗಿತ್ತು. ಡಿಕೆಶಿಯೇ ದ್ವೇಷ ಸಾಧಿಸುವ ಸಲುವಾಗಿ ಬಿಗ್ಬಾಸ್ ರಿಯಾಲಿಟಿ ಶೋ ನಿಲ್ಲುವಂತೆ ಮಾಡಿದ್ದಾರೆ ಎಂದು ಜೆಡಿಎಸ್ ಆರೋಪಿಸಿತ್ತು.
























