ಟಾಕೀಸು, ಸಾರ್ವಜನಿಕ ಸ್ಥಳಗಳಲ್ಲಿ ಆವೇಶ ಬಂದಂತೆ ವರ್ತಿಸುತ್ತಿರುವ ಪ್ರೇಕ್ಷಕರು
ಬೆಂಗಳೂರು : ಕಾಂತಾರಾ ಚಾಪ್ಟರ್-1 ಚಿತ್ರ ನೋಡಿ ಕೆಲವು ಪ್ರೇಕ್ಷಕರು ಮಾಡುತ್ತಿರುವ ಹುಚ್ಚಾಟಗಳು ಚಿತ್ರದ ನಿರ್ಮಾಪಕರಿಗೆ ತಲೆನೋವಾಗಿ ಪರಿಣಮಿಸಿದೆ. ಚಿತ್ರಮಂದಿರದಲ್ಲೇ ದೈವ ಮೈಮೇಲೆ ಆವೇಶ ಆದಂತೆ ವರ್ತಿಸುತ್ತಿರುವ ಪ್ರೇಕ್ಷಕರು ದೈವಾರಾಧನೆಗೆ ಅಪಚಾರ ಮಡುತ್ತಿದ್ದಾರೆ. ಇಂಥ ಅನೇಕ ಹಲವು ವಿಡಿಯೋ ತುಣುಕುಗಳು ವೈರಲ್ ಆಗಿದ್ದು, ದೈವಾರಾಧನೆಯ ಮೂಲವಾದ ಕರಾವಳಿಯ ಜನರಿಂದ ಇಂಥ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೈವಾರಾಧನೆ ಅತ್ಯಂತ ಪವಿತ್ರವಾದ ಧಾರ್ಮಿಕ ಸಂಪ್ರದಾಯ. ಅದನ್ನು ಹಾಸ್ಯಾಸ್ಪದವಾಗಿ ಅಣಕು ಪ್ರದರ್ಶನ ಮಾಡಬೇಡಿ ಎಂದು ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್ ಮನವಿ ಮಾಡಿಕೊಂಡಿದೆ.
ಕಾಂತಾರ ಚಾಪ್ಟರ್ 1 ಸಿನಿಮಾ ಥಿಯೇಟರ್‌ಗಳಲ್ಲಿ ಕೆಲ ಪ್ರೇಕ್ಷಕರ ಅನುಚಿತ ವರ್ತನೆಗೆ ಹೊಂಬಾಳೆ ಫಿಲ್ಮ್ಸ್ ಬೇಸರ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ.
ತುಳುನಾಡಿನ ಸಂಸ್ಕೃತಿಯ ಪ್ರೌಢತೆಯ ಸಂಕೇತವಾದ ದೈವಾರಾಧನೆ ನಮ್ಮ ನಂಬಿಕೆ, ಭಕ್ತಿ ಹಾಗೂ ತಾಯ್ನಾಡಿನ ಹೆಮ್ಮೆಯ ಪ್ರತಿರೂಪವಾಗಿದೆ. ಕಾಂತಾರ ಮತ್ತು ಕಾಂತಾರ ಚಾಪ್ಟರ್ 1 ಚಿತ್ರಗಳನ್ನು ನಾವು ಗೌರವದೊಂದಿಗೆ ದೈವಗಳ ಮಹಿಮೆಯನ್ನು ಕೊಂಡಾಡುವ ಸದುದ್ದೇಶದಿಂದ ನಿರ್ಮಿಸಿದ್ದೇವೆ. ದೈವಾರಾಧನೆ ಗೌರವ ಹಾಗೂ ಅಚಲ ಭಕ್ತಿಯನ್ನು ಉಳಿಸಿಕೊಳ್ಳುವ ಸಲುವಾಗಿ ನಾವು ಶ್ರಮಪಟ್ಟು ಕೆಲಸ ಮಾಡಿದ್ದೇವೆ. ಇದರೊಂದಿಗೆ ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾರಿ ಯಶಸ್ವಿಯಾಗಿದ್ದೇವೆ. ಪ್ರೇಕ್ಷಕರಿಂದ ಬಂದಿರುವ ಅಪಾರವಾದ ಪ್ರೀತಿಗೆ ಹಾಗೂ ಪ್ರೋತ್ಸಾಹಕ್ಕೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
ಇತ್ತೀಚೆಗೆ ಕೆಲವು ಜನರು ಚಿತ್ರದಲ್ಲಿ ತೋರಿಸಿದ ದೈವಪಾತ್ರಗಳನ್ನು ಅನುಕರಿಸುತ್ತಾ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಚಿತ್ರಗಳಲ್ಲಿ ತೋರಿಸಲಾದ ದೈವಾರಾಧನೆ ಅಥವಾ ದೈವಪೂಜೆ ಅತ್ಯಂತ ಪವಿತ್ರವಾದ ಆಧ್ಯಾತ್ಮಿಕ ಸಂಪ್ರದಾಯಕ್ಕೆ ಆಧಾರಿತವಾಗಿದೆ. ಇದನ್ನು ಹಾಸ್ಯಾಸ್ಪದವಾಗಿ ಅಣುಕು ಪ್ರದರ್ಶನ ಮಾಡುವಂತಿಲ್ಲ. ಇಂತಹ ಕೃತ್ಯಗಳು ನಮ್ಮ ನಂಬಿಕೆ ಮತ್ತು ಧಾರ್ಮಿಕ ಸಂವೇದನೆಯನ್ನು ಹೀನಗೊಳಿಸುತ್ತವೆ ಮತ್ತು ತುಳುನಾಡಿನ ಜನರ ಭಾವನೆಗಳಿಗೆ ತೀವ್ರ ನೋವುಂಟು ಮಾಡುತ್ತವೆ.
ದೈವಪಾತ್ರಗಳನ್ನು ಅನುಕರಿಸುವುದು, ಧ್ವನಿಯನ್ನು ನಕಲು ಮಾಡುವುದು ಅಥವಾ ರೂಪ-ವೇಷಧಾರಣೆ ಮಾಡುವುದು ಸೇರಿದಂತೆ ಯಾವುದೇ ರೀತಿಯ ಕೃತ್ಯಗಳಿಂದ ದೂರವಿರಿ. ಇದನ್ನು ಚಿತ್ರಮಂದಿರಗಳಲ್ಲಿ ಆಗಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಗಲಿ ಎಲ್ಲೂ ಮಾಡುವಂತಿಲ್ಲ. ದೈವಾರಾಧನೆಯ ಪಾವಿತ್ರ್ಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಆರಾಧನೆಯ ಆಧ್ಯಾತ್ಮಿಕ ಮಹತ್ವವನ್ನು ಎಲ್ಲರೂ ಗುರುತಿಸಿ, ಗೌರವದಿಂದ ನಡೆದುಕೊಳ್ಳಬೇಕು. ನಮ್ಮ ಚಿತ್ರಗಳ ಮೂಲಕ ನಾವು ಸಂಭ್ರಮಿಸಿದ ನಂಬಿಕೆಯನ್ನು ಯಾವುದೇ ಸಂದರ್ಭದಲ್ಲಿ ಹಾಸ್ಯಾಸ್ಪದವಾಗಲು ಅವಕಾಶ ನೀಡಬಾರದು. ಈ ಅಮೂಲ್ಯ ಸಾಂಸ್ಕೃತಿಕ ಪರಂಪರೆಯ ಪವಿತ್ರತೆಯನ್ನು ಕಾಪಾಡಲು ನೀವು ನೀಡುತ್ತಿರುವ ನಿರಂತರ ಪ್ರೋತ್ಸಾಹ ಮತ್ತು ಸಹಕಾರಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಎಂದು ಹೊಂಬಾಳೆ ಫಿಲ್ಮ್ಸ್ ಮನವಿ ಮಾಡಿಕೊಂಡಿದೆ.
























