ಮಮ್ಮುಟ್ಟಿ, ದುಲ್ಕರ್‌ ಸಲ್ಮಾನ್‌, ಪೃಥ್ವಿರಾಜ್‌ ಮನೆಗೆಳ ಇ.ಡಿ. ದಾಳಿ

ಬೆಳ್ಳಂಬೆಳಗ್ಗೆ ಮಲಯಾಳಂ ಸೂಪರ್‌ಸ್ಟಾರ್‌ಗಳಿಗೆ ಇ.ಡಿ. ದಾಳಿಯ ಶಾಕ್‌

ತಿರುವನಂತಪುರ: ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್‌ಗಳಾದ ಮಮ್ಮುಟ್ಟಿ, ಪೃಥ್ವಿರಾಜ್‌ ಸುಕುಮಾರನ್‌, ಮಮ್ಮುಟ್ಟಿಯವರ ಮಗ ನಟ ದುಲ್ಕರ್‌ ಸಲ್ಮಾನ್‌ ಮನೆ ಮತ್ತು ಕಚೇರಿಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ಕೇರಳದಲ್ಲಿ ಕಳೆದ ಕೆಲ ದಿನಗಳಿಂದ ಸಿನಿಮಾ ತಾರೆಯರು ಒಳಗೊಂಡಿರುವ ಸ್ಮಗ್ಲಿಂಗ್ ಪ್ರಕರಣ ಸದ್ದು ಮಾಡುತ್ತಿದೆ. ವಿದೇಶಗಳ ಐಷಾರಾಮಿ ಕಾರುಗಳನ್ನು ಅಕ್ರಮವಾಗಿ ಖರೀದಿ ಮಾಡಲಾಗಿದೆ ಎಂಬ ಗುಮಾನಿಯ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಕೆಲ ವಾರಗಳ ಹಿಂದಷ್ಟೆ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಇನ್ನೂ ಹಲವಾರು ಜನರ ಮನೆಗಳ ಮೇಲೆ ದಾಳಿ ಮಾಡಿದ್ದರು. ದಾಳಿ ಸಮಯದಲ್ಲಿ ಪೃಥ್ವಿರಾಜ್ ಸುಕುಮಾರನ್‌ ಅವರಿಗೆ ಸೇರಿದ ಕಾರುಗಳನ್ನು ಜಪ್ತಿ ಮಾಡಲಾಗಿತ್ತು. ಇದರ ಬೆನ್ನಿಗೆ ಜಾರಿ ನಿರ್ದೆಶನಾಲಯ ರಂಗಕ್ಕಿಳಿದಿದೆ.

ಮಮ್ಮುಟಿ ಅವರಿಗೆ ಸೇರಿದ ಚೆನ್ನೈಯಲ್ಲಿರುವ ಕಚೇರಿ, ಮಮ್ಮುಟಿ ಅವರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ದುಲ್ಕರ್ ಸಲ್ಮಾನ್ ಅವರ ಕಚೇರಿ, ನಿವಾಸ, ಪೃಥ್ವಿರಾಜ್ ಸುಕುಮಾರನ್‌ ಅವರ ಮನೆ, ನಟ ಅಮಿತ್ ಚಕ್ಕಲಕಲ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಒಟ್ಟು 17 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.





















































 
 

ಕೆಲ ದಿನಗಳ ಹಿಂದಷ್ಟೆ ಕಸ್ಟಮ್ಸ್ ಅಧಿಕಾರಿಗಳು ‘ನೂಮ್ಕೂರ್’ ಹೆಸರಿನಲ್ಲಿ ಕೇರಳ ರಾಜ್ಯದಾದ್ಯಂತ ಹಲವು ನಗರಗಳಲ್ಲಿ ಸಿನಿಮಾ ನಟರು, ಉದ್ಯಮಿಗಳ ಮನೆಗಳ ಮೇಲೆ ದಾಳಿ ನಡೆಸಿ ಅವರು ಹೊಂದಿರುವ ವಿದೇಶಿ ಕಾರುಗಳು ಅವುಗಳ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಈ ವೇಳೆ ದುಲ್ಕರ್ ಸಲ್ಮಾನ್ ಅವರಿಗೆ ಸೇರಿದ ಕಾರೊಂದನ್ನು ಜಪ್ತಿ ಮಾಡಲಾಗಿತ್ತು. ದುಲ್ಕರ್ ಸಲ್ಮಾನ್ ಅವರ ಬಳಿ ವಿದೇಶಿ ಬ್ರ್ಯಾಂಡುಗಳ ಸುಮಾರು 40ಕ್ಕೂ ಹೆಚ್ಚು ಕಾರುಗಳ ಸಂಗ್ರಹ ಇರುವುದು ಬೆಳಕಿಗೆ ಬಂದಿತ್ತು. ದುಲ್ಕರ್ ಮಾತ್ರವಲ್ಲದೆ ಪೃಥ್ವಿರಾಜ್ ಸುಕುಮಾರನ್‌ ಅವರ ನಿವಾಸದ ಮೇಲೂ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದರು. ಅದೇ ಕಾರಣಕ್ಕೆ ಈಗ ಇಡಿ ಸಹ ದುಲ್ಕರ್, ಮಮ್ಮುಟಿ, ಪೃಥ್ವಿರಾಜ್ ಹಾಗೂ ಇನ್ನೂ ಕೆಲವರ ಮೇಲೆ ದಾಳಿ ನಡೆಸಿದೆ.

ಭೂತಾನ್ ಸೇನೆಯಿಂದ ವಿದೇಶಿ ಐಶಾರಾಮಿ ಕಾರುಗಳನ್ನು ಕಡಿಮೆ ದರಕ್ಕೆ ಖರೀದಿ ಮಾಡಿ ಅವನ್ನು ಕಳ್ಳದಾರಿಯಿಂದ ಭಾರತಕ್ಕೆ ತಂದು, ನಕಲಿ ಹೆಸರುಗಳಲ್ಲಿ ನೊಂದಣಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಇಂಥಹ ನಕಲಿ ದಾಖಲೆಯ, ತೆರಿಗೆ ವಂಚಿಸಿ ತಂದಿರುವ ಕಾರುಗಳು ಕೇರಳದಲ್ಲಿ ಹೆಚ್ಚಾಗಿದ್ದರಿಂದ ಕಸ್ಟಮ್ಸ್ ಅಧಿಕಾರಿಗಳು ರಾಜ್ಯದಾದ್ಯಂತ ಹಲವಾರು ಉದ್ಯಮಿಗಳು, ಸಿನಿಮಾ ಸೆಲೆಬ್ರಿಟಿಗಳ ಮನೆಗಳ ಮೇಲೆ ದಾಳಿ ಮಾಡಿ, ಹಲವು ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

error: Content is protected !!
Scroll to Top