ಜಾತಿ ಗಣತಿಗಾಗಿ ಶಾಲಾ ಸಮಯವೇ ಬದಲು : ಬೆಳಗ್ಗೆ 8 ಗಂಟೆಗೆ ಶುರು

ಮಧ್ಯಾಹ್ನದ ತನಕ ಪಾಠ ಬಳಿಕ ಗಣತಿಗಾಗಿ ಮನೆ ಮನೆಗೆ ಭೇಟಿ

ಬೆಂಗಳೂರು : ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿನ​ ಜಾತಿ ಗಣತಿ ಮುಗಿಯದ ಹಿನ್ನೆಲೆ ಅವಧಿ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಕರ್ನಾಟಕದಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಮಯ ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಮಂಗಳವಾರಕ್ಕೆ (ಅ.7) ಅಂತ್ಯವಾಗಬೇಕಿದ್ದ ಸರ್ವೇ ಕಾರ್ಯವನ್ನು ಅ.12ರವರೆಗೂ, ಬೆಂಗಳೂರಿನಲ್ಲಿ 1 ವಾರ ತಡವಾಗಿಶುರುವಾಗಿರುವ ಕಾರಣ ಅ.24ರವರೆಗೂ ವಿಸ್ತರಿಸಲಾಗಿದೆ. ಇನ್ನುಳಿದ ಅವಧಿಯಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ಶಾಲೆಯಲ್ಲಿ ಪಾಠ ಪ್ರವಚನ ಮುಗಿಸಿ ಮಧ್ಯಾಹ್ನದ ನಂತರ ಸರ್ವೇ ನಡೆಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.





















































 
 

ಕಳೆದ ಸೆಪ್ಟೆಂಬರ್ 22ರಿಂದ ಜಾತಿ ಗಣತಿ ಆರಂಭಗೊಂಡಿದೆ. ಈ ಗಣತಿಯನ್ನು ಅಕ್ಟೋಬರ್ 7ಕ್ಕೆ ಮುಗಿಸುವಂತೆ ಹೇಳಿತ್ತು. ಸರ್ಕಾರಕ್ಕೆ ಕೊಟ್ಟ ಈ ಗಡುವಿಗೆ ಇಂದೇ ಕೊನೆಯ ದಿನ. ಆದರೆ ಅಂದುಕೊಂಡಂತೆ ಸಮೀಕ್ಷೆ ಮುಕ್ತಾಯವಾಗಿಲ್ಲ. ಸಮೀಕ್ಷೆ ಇನ್ನು ಬಾಕಿ ಉಳಿದ ಹಿನ್ನೆಲೆ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಅ.12ರವರೆಗೆ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಅಕ್ಟೋಬರ್ 8 ರಿಂದ ಶಾಲಾ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ.

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅ.8ರಿಂದ 12ರ ವರೆಗೆ ಶಾಲಾ ತರಗತಿಗಳನ್ನು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿರ್ವಹಿಸಿ, ನಂತರದ ಅವಧಿಯಲ್ಲಿ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ಭಾಗಿ ಆಗಬೇಕು. ಸಮೀಕ್ಷೆಯನ್ನು ರಜಾ ದಿನಗಳಲ್ಲಿಯೂ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಅಕ್ಟೋಬರ್ 24 ವರೆಗೆ ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರಿಗೆ ಅವಧಿ ವಿಸ್ತರಣೆ ಮಾಡಲಾಗಿದೆ.

ಕರ್ನಾಟಕದಾದ್ಯಂತ ಸಮೀಕ್ಷೆಯನ್ನು ಅಕ್ಟೋಬರ್ 12ರ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಗ್ರೇಟರ್‌ ಬೆಂಗಳೂರಿನಲ್ಲಿ ಅಕ್ಟೋಬರ್ 24ರೊಳಗೆ ಪೂರ್ಣಗೊಳಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಗಡುವು ನೀಡಿದೆ.

error: Content is protected !!
Scroll to Top