ಆರ್ಥಿಕ ಮುಗ್ಗಟ್ಟಿನಿಂದ ಕೃತ್ಯ ಎಂಬ ಶಂಕೆ
ಮಂಜೇಶ್ವರ: ಯುವ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೈದ ದಾರುಣ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಂಬಾರು ಎಂಬಲ್ಲಿ ನಡೆದಿದೆ. ಕಡಂಬಾರಿನ ಅಜಿತ್ (35) ಮತ್ತು ಪತ್ನಿ ಶ್ವೇತಾ (27) ಮೃತಪಟ್ಟವರು. ಅಜಿತ್ ಪೈಂಟಿಂಗ್ ಕಾರ್ಮಿಕರಾಗಿದ್ದು, ಶ್ವೇತಾ ವರ್ಕಾಡಿ ಬೇಕರಿ ಜಂಕ್ಷನ್‌ನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಸೋಮವಾರ ಘಟನೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿ ಇಬ್ಬರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಜಿತ್ ರಾತ್ರಿ ಹಾಗೂ ಶ್ವೇತಾ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಸೋಮವಾರ ಅಜಿತ್ ಮೂರು ವರ್ಷದ ತನ್ನ ಮಗನ ಸಹಿತ ಬಂದ್ಯೋಡಿನಲ್ಲಿರುವ ಸಹೋದರಿಯ ಮನೆಗೆ ಹೋಗಿ ಬೇರೆ ಕಡೆಗೆ ಹೋಗಲಿದ್ದು, ಮಗನನ್ನು ನೋಡಿಕೊಳ್ಳುವಂತೆ ಹೇಳಿ ತೆರಳಿದ್ದರು ಎನ್ನಲಾಗಿದೆ. ಮಗನನ್ನು ಸಹೋದರಿ ಮನೆಯಲ್ಲಿ ಬಿಟ್ಟು ಮರಳಿದ ಅಜಿತ್ ಹಾಗೂ ಪತ್ನಿ ಶ್ವೇತಾ ವಿಷ ಸೇವಿಸಿದ್ದಾರೆ.
ಸಂಜೆ ಮನೆ ವರಾಂಡದಲ್ಲಿ ಬಿದ್ದಿದ್ದ ಇಬ್ಬರನ್ನು ಪರಿಸರವಾಸಿಗಳು ಗಮನಿಸಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರೂ ಮೃತಪಟ್ಟಿದ್ದಾರೆ. ಆರ್ಥಿಕ ಮುಗ್ಗಟ್ಟು ಕೃತ್ಯಕ್ಕೆ ಕಾರಣ ಎಂದು ಪೊಲೀಸರ ಪ್ರಾಥಮಿಕ ಮಾಹಿತಿ ತಿಳಿಸಿವೆ. ಮಂಜೇಶ್ವರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
























