ಸಿನಿಮಾ ಶೂಟಿಂಗ್ ವೇಳೆ ನಟಿಗೆ ಕಿರುಕುಳ ನೀಡಿದ ದೂರು
ಬೆಂಗಳೂರು : ನಟಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ‘ರಿಚ್ಚಿ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿ, ನಟಿಸಿ ನಿರ್ಮಾಣವನ್ನೂ ಮಾಡಿದ್ದ ಹೇಮಂತ್ ಎಂಬಾತನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ರಿಚ್ಚಿ ಸಿನಿಮಾದ ಶೂಟಿಂಗ್ ವೇಳೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಿಗ್ ಬಾಸ್ 11 ಸ್ಪರ್ಧಿಯೂ ಆಗಿರುವ ನಟಿ ದೂರು ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೇಮಂತ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
2022ರಲ್ಲಿ ನಟಿಗೆ ಹೇಮಂತ್ ಪರಿಚಯ ಆಗಿ ರಿಚ್ಚಿ ಎಂಬ ಚಿತ್ರದಲ್ಲಿ ನಟಿಗೆ ಅವಕಾಶ ನೀಡಿದ್ದ. ಸಿನಿಮಾದ ಪ್ರಚಾರಕ್ಕೆಂದು 2023ರ ಆಗಸ್ಟ್ 5ರಂದು ಸುದ್ದಿಗೋಷ್ಠಿಗೆಂದು ಮುಂಬೈಗೆ ಹೋದಾಗ ಮಾಕ್ಟೇಲ್ನಲ್ಲಿ ಮದ್ಯ ಬೆರೆಸಿ ನಟಿಗೆ ಕುಡಿಸಿದ್ದ. ಅಮಲು ಬರಿಸಿ ಖಾಸಗಿ ವಿಡಿಯೋಗಳು, ಚಿತ್ರಗಳನ್ನು ತೆಗೆದುಕೊಂಡಿರುವ ನಟ ಹೇಮಂತ್, ಬಳಿಕ ನಟಿಯನ್ನು ಲೈಂಗಿಕವಾಗಿ ಬಳಸಿಕೊಂಡು ಆ ಬಳಿಕ ಬ್ಲಾಕ್ಮೇಲ್ ಮಾಡಿರುವುದಾಗಿ ನಟಿ ದೂರು ನೀಡಿದ್ದರು. ನಟಿಯ ದೂರಿನ ಬೆನ್ನಲ್ಲೆ ಹೇಮಂತ್ನನ್ನು ಪೊಲೀಸರು ಬಂಧಿಸಿದ್ದಾರೆ.
ಹೇಮಂತ್ ಮತ್ತು ನಟಿಯ ನಡುವೆ ಈ ಹಿಂದೆಯೂ ಜಗಳ ನಡೆದಿತ್ತು. ನಟಿ ತಮ್ಮ ‘ರಿಚ್ಚಿ’ ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ಲ, ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ಹೇಮಂತ್ ಫಿಲಂ ಚೇಂಬರ್ಗೆ ದೂರು ನೀಡಿದ್ದ. ಅದಕ್ಕೂ ಹಿಂದೆ 2023ರಲ್ಲಿ ನಟಿ ಹಾಗೂ ಆಕೆಯ ತಾಯಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಹೇಮಂತ್ ಫಿಲಂ ಚೇಂಬರ್ ಮೆಟ್ಟಿಲೇರಿದ್ದ. ಆ ಸಮಯದಲ್ಲಿ ಫಿಲಂ ಚೇಂಬರ್ನವರು ಮಧ್ಯಸ್ಥಿಕೆ ವಹಿಸಿ ಸಂಧಾನ ಮಾಡಿದ್ದರು.
























