ಭಾರತ ತಂಡದ ಹೊಣೆ ಹೊಸ ತಲೆಮಾರಿಗೆ ಹಸ್ತಾಂತರ : ಐವರು ದಿಗ್ಗಜರಿಗೆ ಸ್ಥಾನವೇ ಇಲ್ಲ

ಅಕ್ಟೋಬರ್‌ 19ರಿಂದ ಭಾರತ-ಆಸ್ಟ್ರೇಲಿಯಾ ಮಹತ್ವದ ಸರಣಿ ಪ್ರಾರಂಭ

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿ ಅಕ್ಟೋಬರ್ 19ರಿಂದ ಶುರುವಾಗಲಿದ್ದು, ಆಸ್ಟೇಲಿಯಾದಲ್ಲಿ ನಡೆಯಲಿರುವ ಈ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡಗಳನ್ನು ಶುಭ್​ಮನ್ ಗಿಲ್ ಹಾಗೂ ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಆದರೆ ಈ ಸಲ ಆಯ್ಕೆ ಸಮಿತಿ ಮಾಡಿರುವ ಆಯ್ಕೆಗಳು ಮಾತ್ರ ಭಾರಿ ಚರ್ಚೆಗೆ ಗುರಿಯಾಗಿದೆ.

ಬಹಳ ಮುಖ್ಯವಾಗಿ ಭಾರತ ತಂಡದ ನಾಯಕನ ಬದಲಾವಣೆ, ಐವರು ಪ್ರಮುಖ ಆಟಗಾರರನ್ನು ಕೈ ಬಿಟ್ಟಿರುವುದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಇಡೀ ತಂಡಕ್ಕೆ ಹೊಸ ಲುಕ್‌ ನೀಡುವ ಪ್ರಯತ್ನವೊಂದನ್ನು ಈ ಸಲ ಮಾಡಲಾಗಿದ್ದು, ಕ್ರಿಕೆಟ್‌ ಪಂಡಿತರು ಈ ಪ್ರಯೋಗವನ್ನು ನಾನಾ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.





















































 
 

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಲ್​ರೌಂಡ್‌ ಪ್ರದರ್ಶನ ನೀಡಿ ಮಿಂಚಿದ್ದ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಗಾಯದ ಸಮಸ್ಯೆ. ಏಷ್ಯಾಕಪ್ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಪಾಂಡ್ಯ ಅವರಿಗೆ ವೈದ್ಯರು ವಿಶ್ರಾಂತಿ ಸೂಚಿಸಿದ್ದಾರೆ. ಹಿರಿಯ ವೇಗಿ ಮೊಹಮ್ಮದ್ ಶಮಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಆದರೆ ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಗಿಡಲಾಗಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಗಾಯಗೊಂಡಿದ್ದ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪಂತ್ ಅವರನ್ನು ಆಯ್ಕೆ ಮಾಡಲಾಗಿಲ್ಲ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಸ್ಪಿನ್ ಆಲ್​ರೌಂಡರ್ ಆಗಿ ಕಣಕ್ಕಿಳಿದಿದ್ದ ರವೀಂದ್ರ ಜಡೇಜಾ ಅವರನ್ನು ಸಹ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿಲ್ಲ. ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ಸಹ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಪರಿಗಣಿಸಲಾಗಿಲ್ಲ. ಇದಾಗ್ಯೂ ಅವರಿಗೆ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿದೆ.

ಶುಭ್​​ಮನ್ ಗಿಲ್ ನಾಯಕ

15 ಸದಸ್ಯರ ಏಕದಿನ ತಂಡವನ್ನು ಶುಭ್​​ಮನ್ ಗಿಲ್ ಮುನ್ನಡೆಸಲಿದ್ದಾರೆ. ಉಪನಾಯಕನಾಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಟೀಮ್ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಿತ್ತು. ಈ ವೇಳೆ ಉಪನಾಯಕನಾಗಿ ಶುಭ್​​ಮನ್ ಗಿಲ್ ಕಾಣಿಸಿಕೊಂಡಿದ್ದರು.

ಆದರೀಗ ಒಂದೇ ವರ್ಷದಲ್ಲಿ ಟೀಮ್ ಇಂಡಿಯಾ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯಾಗಿದೆ. ಇಲ್ಲಿ ರೋಹಿತ್ ಶರ್ಮಾ ಅವರ ಸ್ಥಾನದಲ್ಲಿ ಶುಭ್​ಮನ್ ಗಿಲ್ ಹಾಗೂ ಸೂರ್ಯಕುಮಾರ್ ಯಾದವ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಹಾರ್ದಿಕ್ ಪಾಂಡ್ಯ ಅವರಿಗಿದ್ದ ಉಪನಾಯಕತ್ವ ಒಂದೇ ವರ್ಷದಲ್ಲಿ ಶ್ರೇಯಸ್ ಅಯ್ಯರ್ ಪಾಲಾಗಿದೆ.

2024ರಲ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದರು. ಉಪನಾಯಕನಾಗಿ ಜಸ್​ಪ್ರೀತ್ ಬುಮ್ರಾ ಕಾರ್ಯ ನಿರ್ವಹಿಸಿದ್ದರು. ಏಕದಿನ ಮತ್ತು ಟಿ20 ತಂಡಗಳನ್ನು ರೋಹಿತ್ ಶರ್ಮಾ ಮುನ್ನಡೆಸಿದರೆ, ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಜವಾಬ್ದಾರಿ ನಿರ್ವಹಿಸಿದ್ದರು.

2025ರಲ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವ ಶುಭ್​ಮನ್ ಗಿಲ್ ಪಾಲಾಗಿದೆ. ಹಾಗೆಯೇ ಉಪನಾಯಕನಾಗಿ ರಿಷಭ್ ಪಂತ್ ಇದ್ದಾರೆ. ಏಕದಿನ ತಂಡದ ನಾಯಕನಾಗಿ ಶುಭ್​ಮನ್ ಗಿಲ್ ಆಯ್ಕೆಯಾದರೆ, ಉಪನಾಯಕತ್ವ ಶ್ರೇಯಸ್ ಅಯ್ಯರ್​ಗೆ ಒಲಿದಿದೆ. ಹಾಗೆಯೇ ಟಿ20 ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಕಾರ್ಯ ನಿರ್ವಹಿಸುತ್ತಿದ್ದರೆ, ವೈಸ್ ಕ್ಯಾಪ್ಟನ್ ಆಗಿ ಶುಭ್​ಮನ್ ಗಿಲ್ ಕಾಣಿಸಿಕೊಳ್ಳುತ್ತಿದ್ದಾರೆ.

ಒಂದೇ ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯಾಗಿದೆ. ಎರಡು ಸ್ವರೂಪಗಳಲ್ಲೂ ಶುಭ್​ಮನ್ ಗಿಲ್ ಕ್ಯಾಪ್ಟನ್ ಪಟ್ಟದೊಂದಿಗೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್​ ಬಳಿಕ ಭಾರತ ಟಿ20 ತಂಡದ ನಾಯಕತ್ವ ಕೂಡ ಗಿಲ್ ಪಾಲಾಗುವ ಸಾಧ್ಯತೆಯಿದೆ.

ಭಾರತ ಏಕದಿನ ತಂಡ

ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಧ್ರುವ್ ಜುರೆಲ್.

ಭಾರತ ಟಿ20 ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವರುಣ್ ಚಕ್ರವರ್ತಿ, ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹರ್ಷಿತ್ ರಾಣಾ.

error: Content is protected !!
Scroll to Top