ಬೆಳಗಾವಿಯಲ್ಲಿ ಐ ಲವ್‌ ಮೊಹಮ್ಮದ್‌ ವಿವಾದ : ಕಲ್ಲು ತೂರಾಟ

ಕೋಮು ಸಂಘರ್ಷಕ್ಕೆ ತಿರುಗಿದ ಉರೂಸ್‌ ಮೆರವಣಿಗೆ

ಬೆಂಗಳೂರು : ಬೆಳಗಾವಿಯಲ್ಲಿ ಶುಕ್ರವಾರ ನಡೆದ ಉರೂಸ್ ಮೆರವಣಿಗೆ ಹಿಂದೂ-ಮುಸ್ಲಿಮರ ನಡುವೆ ಜಟಾಪಟಿಗೆ ಕಾರಣವಾಗಿದೆ. ಭಾರಿ ಕಲ್ಲು ತೂರಾಟ ನಡೆದಿದ್ದು, ಅಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿಯ ಖಡೇಬಜಾರ್‌ನ ಖಡಕ್‌ ಗಲ್ಲಿಯಲ್ಲಿ ಶುಕ್ರವಾರ ರಾತ್ರಿ ಕಲ್ಲು ತೂರಾಟ ನಡೆದಿದೆ.

ಪ್ರತಿವರ್ಷದಂತೆ ಈ ವರ್ಷವೂ ಮಾಬುಸುಬಾನಿ ದರ್ಗಾ ಉರೂಸ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯ ಖಡಕ್‌ ಗಲ್ಲಿ ಮೂಲಕ ಮೆರವಣಿಗೆ ಸಾಗಿದೆ. ಕೆಲ ಯುವಕರು ‘ಐ ಲವ್ ಮೊಹಮ್ಮದ್’ ಎಂಬ ಘೋಷಣೆ ಕೂಗುತ್ತಾ ತೆರಳಿದ್ದಾರೆ. ಇದು ಸ್ಥಳೀಯ ಹಿಂದೂಗಳನ್ನು ಕೆರಳಿಸಿದ್ದು ಇದಕ್ಕೆ ಆಕ್ಷೇಪಿಸಿದ್ದಾರೆ. ಇದಾದ ಕೆಲಹೊತ್ತಿನಲ್ಲೇ ಅನ್ಯಕೋಮಿನ ಯುವಕರು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಲ್ವಾರ್ ಪ್ರದರ್ಶಿಸಿ ಗೂಂಡಾ ವರ್ತನೆ ತೋರಿ ಬೆದರಿಸಿದ್ದಾರೆ.





















































 
 

ಪ್ರತಿ ವರ್ಷ ಜಾಲ್ಗಾರ ಗಲ್ಲಿ ಮತ್ತು ಶನಿವಾರ ಕೂಟ ಗಲ್ಲಿ ಮೂಲಕ ದರ್ಗಾಕ್ಕೆ ಉರೂಸ್ ಮೆರವಣಿಗೆ ಹೋಗುತ್ತಿತ್ತು. ಆದರೆ ಈ ಬಾರಿ ಪೊಲೀಸರ ಅನುಮತಿ ಇಲ್ಲದಿದ್ದರೂ ಮರಾಠಿ ಸಮುದಾಯದವರು ಹೆಚ್ಚಿರುವ ಖಡಕ್ ಗಲ್ಲಿಯಲ್ಲಿ ಉರೂಸ್ ಮೆರವಣಿಗೆ ಸಾಗಿದೆ. ಇದೇ ಸ್ಥಳೀಯ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ, ಡಿಸಿಪಿ ನಾರಾಯಣ ಭರಮನಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಲ್ಲುತೂರಾಟ ಮಾಡಿದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಬೆಳಗಾವಿಯ ಖಡಕ್‌ ಗಲ್ಲಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ದಾವಣಗೆರೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಕೂಡ ‘ಐ ಲವ್ ಮೊಹಮ್ಮದ್’ ಫ್ಲೆಕ್ಸ್ ಹಾಕಿದ್ದ ವಿಚಾರ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಕಲ್ಲು ತೂರಾಟ ಕೂಡ ನಡೆದಿತ್ತು. ‘ಐ ಲವ್ ಮೊಹಮ್ಮದ್’ ಎಂಬ ಬರಹವುಳ್ಳ ಫ್ಲೆಕ್ಸ್ ಹಾಕಿದ್ದನ್ನು ಹರಿದು ಹಾಕಲಾಗಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಿಯಬಿಟ್ಟಿದ್ದರಿಂದ ಸಂಘರ್ಷ ಆರಂಭವಾಗಿತ್ತು.

ಕಲಬುರಗಿಯಲ್ಲೂ ಐ ಲವ್ ಮೊಹಮ್ಮದ್ ಬ್ಯಾನರ್

ಈ ಐ ಲವ್ ಮೊಹಮದ್ ಬ್ಯಾನರ್ ವಿವಾದ ಕಲಬುರಗಿಗೂ ಕಾಲಿಟ್ಟಿದೆ. ವೈದ್ಯಕೀಯ ಶಿಕ್ಷಣ ಸಚಿವರ ತವರು ಕ್ಷೇತ್ರವಾದ ಜಿಲ್ಲೆಯ ಸೇಡಂ ತಾಲೂಕಿನ ಊಡಗಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಐ ಲವ್ ಬ್ಯಾನರ್ ಕಂಡು ಬಂದಿದ್ದು ವಿವಿಧ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯ ಸೇಡಂ ತಾಲೂಕಿನ ಊಡಗಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಐ ಲವ್ ಮೊಹಮದ್ ಬ್ಯಾನರ್ ಅಳವಡಿಕೆ ಮಾಡಿದ್ದರಿಂದ ಕೆಲ ಹಿಂದೂ ಸಂಘಟನೆಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದ್ದು, ಹಿಂದೂ ಸಮಾಜವನ್ನು ಏನು ಮಾಡಲು ಹೊರಟಿದ್ದೀರಾ ಎಂದು ಹಿಂದೂ ಸಂಘಟನೆಗಳು ಕಿಡಿಕಾರಿವೆ. ಬ್ಯಾನರ್ ಅಳವಡಿಕೆ ವಿಚಾರ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸ್ ಇಲಾಖೆ ತಕ್ಷಣವೇ ಐ ಲವ್ ಮೊಹಮದ್ ಬ್ಯಾನರ್ ಅನ್ನು ತೆರವು ಮಾಡಿದೆ.

error: Content is protected !!
Scroll to Top