ರಾಷ್ಟ್ರೀಯ ಪ್ರಜ್ಞೆಯ ಸದ್ಗುಣಶೀಲ ಅವತಾರ : ಆರ್‌ಎಸ್‌ಎಸ್‌ನ್ನು ಬಣ್ಣಿಸಿದ ಪ್ರಧಾನಿ

ಭಾರತ ಮಾತೆಯ ಚಿತ್ರವುಳ್ಳ ನಾಣ್ಯ ಇತಿಹಾಸಲ್ಲೇ ಮೊದಲು

ನವದೆಹಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವ ಸಂಭ್ರಮದಲ್ಲಿದೆ. ಸಂಘಟನೆಯನ್ನು ಭಾರತದ ಪ್ರತಿಯೊಂದು ಅಂಶದ ಮೇಲೆ ಪ್ರಭಾವ ಬೀರಿದ ಶಾಶ್ವತ ರಾಷ್ಟ್ರೀಯ ಪ್ರಜ್ಞೆಯ ಸದ್ಗುಣಶೀಲ ಅವತಾರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ಇದೇ ವೇಳೆ ಆರ್‌ಎಸ್‌ಎಸ್‌ ಶತಮಾನೋತ್ಸವ ಸ್ಮರಣಾರ್ಥ ಹೊರತಂದಿರುವ 100 ರೂಪಾಯಿಯ ವಿಶೇಷ ನಾಣ್ಯವನ್ನು ಪ್ರಧಾನಿ ಬಿಡುಗಡೆಗೊಳಿಸಿದರು. ಇದು ಆರ್‌ಎಸ್‌ಎಸ್‌ ಶತಮಾನೋತ್ಸವದ ನಾಣ್ಯ ಎಂದು ಮಾತ್ರವಲ್ಲ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇದೇ ಮೊದಲ ಬಾರಿಗೆ ಭಾರತದ ನಾಣ್ಯವೊಂದರಲ್ಲಿ ಭಾರತ ಮಾತೆಯ ಚಿತ್ರ ಮುದ್ರಿತವಾಗಿರುವುದು ವಿಶೇಷವಾಗಿದೆ. ನಾಣ್ಯದ ಮುಂಬದಿಯಲ್ಲಿ 100 ರೂಪಾಯಿಯನ್ನು ಗುರುತಿಸುವ ಅಂಕಿ ಇದ್ದರೆ, ಹಿಂಬದಿಯಲ್ಲಿ ‘ವರದ ಮುದ್ರೆ’ಯಲ್ಲಿ ಸಿಂಹದ ಮೇಲೆ ಕುಳಿತಿರುವ ಭಾರತ ಮಾತೆಯ ಚಿತ್ರವಿದೆ ಮತ್ತು ಸ್ವಯಂಸೇವಕರು ಆಕೆಯ ಮುಂದೆ ಸಮರ್ಪಣಾ ಭಾವದಿಂದ ನಮಸ್ಕರಿಸುವ ಚಿತ್ರ ಮುದ್ರಿಸಲಾಗಿದೆ. ಅದರೊಂದಿಗೆ ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷ ಎಂದು ಬರೆಯಲಾಗಿದೆ. ನಾಣ್ಯದ ಮೇಲೆ “ರಾಷ್ಟ್ರೀಯ ಸ್ವಾಹಾ, ಇದಂ ರಾಷ್ಟ್ರಾಯ, ಇದಂ ನ ಮಮ” ಎಂಬ ಆರ್‌ಎಸ್‌ಎಸ್ ಧ್ಯೇಯವಾಕ್ಯವೂ ಇದೆ. ಇದರ ಅರ್ಥ “ಎಲ್ಲವೂ ರಾಷ್ಟ್ರಕ್ಕೆ ಸಮರ್ಪಿತ, ಎಲ್ಲವೂ ರಾಷ್ಟ್ರದ್ದು, ಯಾವುದೂ ನನ್ನದಲ್ಲ”.





















































 
 

ನಾಗ್ಪುರದಲ್ಲಿ 1925ರಲ್ಲಿ ಡಾ.ಕೇಶವ್ ಬಲಿರಾಮ್ ಹೆಡ್ಗೆವಾರ್ ಸ್ಥಾಪಿಸಿದ ಆರ್‌ಎಸ್‌ಎಸ್ ಸಾಂಸ್ಕೃತಿಕ ಅರಿವು, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸುವ ಸ್ವಯಂಸೇವಕ ಆಧಾರಿತ ಸಂಘಟನೆಯಾಗಿ ಆರಂಭಗೊಂಡಿತು. ಕಳೆದ ಒಂದು ಶತಮಾನದಲ್ಲಿ ಇದು ಭಾರತದ ಅತ್ಯಂತ ಪ್ರಭಾವಶಾಲಿ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳಲ್ಲಿ ಒಂದಾಗಿ ಬೆಳೆದಿದ್ದು, 100 ವರ್ಷ ಪೂರೈಸಿದೆ.

ಬುಧವಾರ ದೆಹಲಿಯ ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ವಿಶೇಷ ಅಂಚೆ ಚೀಟಿ ಮತ್ತು 100 ರೂ. ನಾಣ್ಯವನ್ನು ಬಿಡುಗಡೆ ಮಾಡಲಾಯಿತು. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ವಿಶೇಷ ಲಾಂಛನ ಹೊಂದಿರುವ ನಾಣ್ಯ ಬಿಡುಗಡೆ ಆಗಿದೆ.

ಮಂಗಳವಾರ ನಿಧನರಾದ ಹಿರಿಯ ಬಿಜೆಪಿ ನಾಯಕ ವಿಜಯ್ ಕುಮಾರ್ ಮಲ್ಹೋತ್ರಾ ಹಾಗೂ ಸಂಸ್ಥಾಪಕ ಹೆಡ್ಗೆವಾರ್ ಅವರಿಗೆ ಗೌರವ ಸಲ್ಲಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಮಾತು ಆರಂಭಿಸಿ ವಿಜಯ ದಶಮಿಯು ಕೆಟ್ಟದಿನ ಮೇಲೆ ಒಳ್ಳೆಯತನ, ಅನ್ಯಾಯದ ಮೇಲೆ ನ್ಯಾಯ, ಸುಳ್ಳಿನ ಮೇಲೆ ಸತ್ಯ ಮತ್ತು ಕತ್ತಲೆಯ ಮೇಲೆ ಬೆಳಕಿನ ಜಯದ ಘೋಷಣೆ ಆಗಿದೆ. 100 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಸ್ಥಾಪನೆ ಕಾಕತಾಳೀಯವಲ್ಲ. ಸಂಘವು ನಮ್ಮ ಶಾಶ್ವತ ರಾಷ್ಟ್ರೀಯ ಪ್ರಜ್ಞೆಯ ಸದ್ಗುಣ ಅವತಾರವಾಗಿದೆ ಎಂದು ಹೇಳಿದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ಕರೆನ್ಸಿಯಲ್ಲಿ ಭಾರತ ಮಾತೆಯ ಚಿತ್ರವನ್ನು ಮುದ್ರಿಸಲಾಗಿದೆ. ಇದು ಅತ್ಯಂತ ಹೆಮ್ಮೆ ಮತ್ತು ಐತಿಹಾಸಿಕ ಕ್ಷಣ ಎಂದು ಮೋದಿ ಬಣ್ಣಿಸಿದ್ದಾರೆ.

ನಾಣ್ಯದ ಜತೆಗೆ ಬಿಡುಗಡೆಯಾದ ಅಂಚೆ ಚೀಟಿಯಲ್ಲಿ 1963ರ ಗಣರಾಜ್ಯೋತ್ಸವದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನದ ಚಿತ್ರವಿದೆ. ಭಾರತ ಮಾತೆಗೆ ಆರ್‌ಎಸ್‌ಎಸ್‌ ಶತಮಾನಗಳಷ್ಟು ಕಾಲ ಸಲ್ಲಿಸುತ್ತಿರುವ ಸೇವೆಗೆ ದೊರೆತ ಹೆಮ್ಮೆಯ ಗೌರವ ಇದು ಎಂದು ಮೋದಿ ಹೇಳಿದ್ದಾರೆ. ದೆಹಲಿಯ ಅಂಬೇಡ್ಕರ್ ಇಂಟರ್​ನ್ಯಾಷನಲ್ ಸೆಂಟರ್​ನಲ್ಲಿ ಆರ್‌ಎಸ್‌ಎಸ್‌ ಶತಮಾನೋತ್ಸವ ಆಚರಣೆಯನ್ನು ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದು, ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭಾಗವಹಿಸಿದ್ದರು.

ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ದಿಂದೇಟು ಹಾಕಿದ ಸಿಜೆಐ ತಾಯಿ

ಶತಮಾನೋತ್ಸವ ಸಮಾರಂಭದಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಆರ್‌.ಎಸ್‌.ಗವಾಯಿಯವರ ತಾಯಿ ಕಮಲ್ ಗವಾಯಿ ಭಾಗಿಯಾಗಲಿದ್ದಾರೆ ಎಂಬ ಸುದ್ದಿ ಭಾರಿ ಸುದ್ದಿಯಾಗಿತ್ತು. ಇದು ಭಾರಿ ವಿವಾದಕ್ಕೀಡಾಗಿತ್ತು. ಇದರ ಬೆನ್ನಲ್ಲೇ ಇದೀಗ ಈ ಕಾರ್ಯಕ್ರಮದಿಂದ ಹಿಂದೆ ಸರಿಯಲು ಕಮಲ್‌ ಗವಾಯಿ ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ.

ಅಕ್ಟೋಬರ್ 5ರಂದು ಅಮರಾವತಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಮಲ್ ಗವಾಯಿ ಭಾಗಿಯಾಗುತ್ತಾರೆಂಬ ಸುದ್ದಿ ಹಬ್ಬಿತ್ತು. ಇದರಿಂದ ಹಿಂದೆ ಸರಿದಿರುವ ಅವರು ತಾವು ಮತ್ತು ತಮ್ಮ ಪತಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತದಿಂದ ಬದುಕಿದ್ದೇವೆ ಎಂದು ಬರೆದಿದ್ದಾರೆ. ಕಾರ್ಯಕ್ರಮದ ಸುದ್ದಿ ಪ್ರಕಟವಾದ ತಕ್ಷಣ, ಜನರು ನನ್ನ ವಿರುದ್ಧ ಮಾತ್ರವಲ್ಲದೆ ನನ್ನ ಪತಿ ದಾದಾಸಾಹೇಬ್ ಗವಾಯಿ ವಿರುದ್ಧವೂ ಆರೋಪಗಳನ್ನು ಹೊರಿಸಲು ಪ್ರಾರಂಭಿಸಿದರು. ನಾವು ಅಂಬೇಡ್ಕರ್ ಅವರ ತತ್ವಗಳ ಪ್ರಕಾರ ನಮ್ಮ ಜೀವನವನ್ನು ನಡೆಸಿದ್ದೇವೆ ಮತ್ತು ಅವರು ತಮ್ಮ ಇಡೀ ಜೀವನವನ್ನು ಅಂಬೇಡ್ಕರ್ ಚಳವಳಿಗೆ ಮುಡಿಪಾಗಿಟ್ಟರು ಎಂದು ಅವರು ಬರೆದಿದ್ದಾರೆ.

ತಮ್ಮ ಪತಿ ಆರ್‌ಎಸ್‌ಎಸ್ ಕಾರ್ಯಕ್ರಮಗಳಿಗೆ ಹಾಜರಾಗುವುದು ಸೇರಿದಂತೆ ವಿರುದ್ಧ ಸಿದ್ಧಾಂತಗಳ ಸಂಘಟನೆಗಳೊಂದಿಗೆ ಆಗಾಗ್ಗೆ ತೊಡಗಿಸಿಕೊಂಡಿದ್ದರು, ಆದರೆ ಅವರ ಹಿಂದುತ್ವ ತತ್ವಶಾಸ್ತ್ರವನ್ನು ಎಂದಿಗೂ ಸ್ವೀಕರಿಸಿರಲಿಲ್ಲ. ನಾನು ಅಕ್ಟೋಬರ್ 5ರ ಸಮಾರಂಭದಲ್ಲಿ ವೇದಿಕೆಯಲ್ಲಿದ್ದರೆ, ಅಂಬೇಡ್ಕರ್ ಸಿದ್ಧಾಂತವನ್ನು ಮಂಡಿಸುತ್ತಿದ್ದೆ ಎಂದು ಹೇಳಿದ್ದಾರೆ.

error: Content is protected !!
Scroll to Top