ಕಾಂಗ್ರೆಸ್‌ನಲ್ಲಿ ಮತ್ತೆ ಸದ್ದು ಮಾಡಲಾರಂಭಿಸಿದ ಕ್ರಾಂತಿ ವಿಚಾರ

ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಮತ್ತೆ ಕ್ರಾಂತಿ ಸದ್ದು ಮಾಡಲಾರಂಭಿಸಿದೆ. ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದ ಸೆಪ್ಟೆಂಬರ್ ಕ್ರಾಂತಿ ನಡೆಯದಿದ್ದರೂ ಈಗ ನವೆಂಬರ್ ಕ್ರಾಂತಿ ಎಂಬ ಚರ್ಚೆ ಶುರುವಾಗಿದೆ. ಹಲವು ಕಾಂಗ್ರೆಸ್‌ ಶಾಸಕರು ಮುಖ್ಯಮಂತ್ರಿ ಬದಲಾವಣೆ ಕುರಿತು ಮತ್ತೆ ಮಾತನಾಡಲಾರಂಭಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡೂವರೆ ವರ್ಷ ನಾನೇ ಇದ್ದೆ, ಮುಂದಿನ ಎರಡೂವರೆ ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದಿದ್ದಾರೆ.

ನವೆಂಬರ್ ಕ್ರಾಂತಿ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹೈಕಮಾಂಡ್​ ತೀರ್ಮಾನದಂತೆ ನಡೆದುಕೊಳ್ಳಬೇಕು ಎಂದಿದ್ದಾರೆ. ಈ ಬಾರಿ ನೀವೇ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡುತ್ತಿದ್ದೀರಿ. ಮುಂದಿನ ವರ್ಷ ಪುಷ್ಪಾರ್ಚನೆ ಮಾಡುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಐ ಹೋಪ್ ಸೋ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ.





















































 
 

ಡಿಕೆ ಶಿವಕುಮಾರ್ ನವೆಂಬರ್​​ನಲ್ಲಿ ಸಿಎಂ ಆಗುತ್ತಾರೆ ಎಂದು ಮಾಜಿ ಸಂಸದ ಶಿವರಾಮೇಗೌಡ ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಕುಣಿಗಲ್ ಕಾಂಗ್ರೆಸ್ ಶಾಸಕ ಎಚ್‌.ಡಿ ರಂಗನಾಥ್ ಕೂಡ ಡಿಕೆಶಿ ಮುಖ್ಯಮಂತ್ರಿ ಆಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದ್ದು, ಸ್ಥಾನಮಾನದ ಬಗ್ಗೆ ಹೈಕಮಾಂಡ್ ನಿರ್ಧರಿಸಬೇಕು ಎಂದಿದ್ದಾರೆ.

ಶಿವರಾಮೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಚ್‌.ಸಿ ಮಹದೇವಪ್ಪ, ವೈಯಕ್ತಿಕ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದಿದ್ದಾರೆ.

ಈ ನಡುವೆ ಬಿಜೆಪಿ ನಾಯಕರು ಮಾತ್ರ ಕಾಂಗ್ರೆಸ್ ಸಿಎಂ ಕುರ್ಚಿಯ ಜಗಳ ಬೀದಿಗೆ ಬಂದಿದೆ. ನವೆಂಬರ್ ಕ್ರಾಂತಿ ಶತಸಿದ್ಧ ಎಂದು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಸಿಎಂ, ಬಿಜೆಪಿಯವರು ಭವಿಷ್ಯಕಾರರಲ್ಲ ಎಂದಿದ್ದಾರೆ.

error: Content is protected !!
Scroll to Top