ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ರಾಮನಗರ ಶಾರದೋತ್ಸವದ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟನ ಸ್ವರ್ಣ ಮಹೋತ್ಸವದ ಶ್ರೀ ಮಹಾಭಾರತ ಸರಣಿಯ ನೂರನೇ ಕಾರ್ಯಕ್ರಮದ ಶುಭಾಸಂಶನೆ, ಗೌರವಾರ್ಪಣೆ ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಉಮೇಶ ಶೆಣೈ ರಾಮನಗರ ವಹಿಸಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಮತ್ತು ಸಾಹಿತಿಗಳಾದ ಟಿ. ನಾರಾಯಣ ಭಟ್ ರಾಮಕುಂಜ ಮಾತನಾಡಿ ರಾಮಾಯಣ,ಮಹಾಭಾರತದ ಸಂದೇಶಗಳನ್ನು ಜನರು ತಿಳಿದು ಒಳ್ಳೆಯ ಸಂಸ್ಕಾರವನ್ನು ರೂಪಿಸಿಕೊಳ್ಳಲು ಹಿಂದಕ್ಕೆ ಅನುಕೂಲವಿತ್ತು. ಇಂದಿನ ಯುವ ಪೀಳಿಗೆ ಇಂತಹ ಕಲಾ ಕಾರ್ಯಕ್ರಮಗಳಲ್ಲಿ ಕಲಾವಿದರಾಗಿ, ಪ್ರೇಕ್ಷಕರಾಗಿ ಭಾಗವಹಿಸಿ ಭಾರತೀಯ ಸಂಸ್ಕೃತಿಯನ್ನು ತಿಳಿದು ಇತರರಿಗೂ ತಿಳಿಸುವ ಪ್ರಯತ್ನ ಪಡಬೇಕೆಂದು ತಿಳಿಸಿ ಮಹಾಭಾರತ ಸರಣಿಯಲ್ಲಿ 100 ತಾಳಮದ್ದಳೆಗಳನ್ನು ನಡೆಸಿದ ಸಾಧನೆಗೆ ಶ್ರೀ ಕಾಳಿಕಾಂಬಾ ಯಕ್ಷಗಾನ ತಂಡವನ್ನು ಅಭಿನಂದಿಸಿದರು.

ಅತಿಥಿಯಾಗಿದ್ದ ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನ ಹಿರಿಯಡ್ಕ ಇದರ ಗೌರವ ಸಲಹೆಗಾರರಾದ ಜಯರಾಮ ಶೆಟ್ಟಿ ಪಡಂಗಡಿ ಮಾತನಾಡಿ ಶಿಕ್ಷಕರಾಗಿದ್ದ ಗಣಪಯ್ಯ ಶೆಟ್ಟರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಕಲಾವಿದರಿಗೆಲ್ಲ ಮಾರ್ಗದರ್ಶಕವಾಗಿದ್ದು ಅವರ ಸಂಸ್ಮರಣೆಯಲ್ಲಿ ಕಳೆದ 38 ವರ್ಷಗಳಿಂದ ಯಕ್ಷಗಾನ ಕಲಾವಿದರನ್ನು ಮತ್ತು ವಿದ್ಯಾರ್ಥಿಗಳನ್ನು ಪ್ರತಿ ವರ್ಷವೂ ಗೌರವಿಸಲಾಗುತ್ತಿದೆಯೆಂದರು.
ಶಾರದೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಮಡಿವಾಳ, ಧಾರ್ಮಿಕ ದತ್ತಿ ಇಲಾಖೆಯ ಪರಿವೀಕ್ಷಕ ಶ್ರೀಧರ ಎಸ್. ಪಿ ಕೃಷ್ಣಾಪುರ, ಜಯಂತ್ ಪುರೋಳಿ, ಕಂಗ್ವೆ ವಿಶ್ವನಾಥ ಶೆಟ್ಟಿ, ರಾಮಚಂದ್ರ ಮಣಿಯಾಣಿ, ರಾಜೇಶ ಪ್ರಭು ರಾಮನಗರ, ವಿದ್ಯಾಧರ ಜೈನ್, ಗಣೇಶ ಪ್ರಭು, ಸಂಜೀವ ಕೆಮ್ಮಾರ, ಸಂತೋಷ್ ರಾಮನಗರ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.
ಮಹಾಭಾರತ ಸರಣಿಯ ನೂರು ತಾಳಮದ್ದಳೆಗಳನ್ನು ಪೂರೈಸಿದ ಕಾಳಿಕಾಂಬಾ ಟ್ರಸ್ಟಿನ ಅಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ಶಾರದೋತ್ಸವ ಸಮಿತಿಯಿಂದ ಗೌರವಿಸಲಾಯಿತು.
ಯಕ್ಷಗಾನ ಸಂಘಟಕ,ಅರ್ಥದಾರಿ ಜಯರಾಮ ಭಟ್ ದೇವಸ್ಯ ಇವರನ್ನು ಶತಕ ಸಂಭ್ರಮದ ನಿಮಿತ್ತ ಗೌರವಿಸಲಾಯಿತು.
ಭಾಗವತ ಪದ್ಮನಾಭ ಕುಲಾಲ್ ಸ್ವಾಗತಿಸಿದರು. ಶಿಕ್ಷಕಿ ಪುಷ್ಪಾ ತಿಲಕ್, ಟ್ರಸ್ಟಿನ ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
























