ವಿಟ್ಲ: ಅಪ್ರಾಪ್ತ ಬಾಲಕರಿಬ್ಬರು ಖಾಸಗಿ ಸ್ಥಳದಲ್ಲಿದ್ದ ಇಂಟರ್ ಲಾಕ್ ಘಟಕದಲ್ಲಿರುವ ಸಿಸಿ ಕ್ಯಾಮರಾಗಳಿಗೆ ಹಾನಿ ಮಾಡಿ, ದೇವರ ಫೋಟೋ ಮತ್ತು ಡಿವಿಆರ್ ಅನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಪುಣಚದಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿ ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಘಟನೆಯಲ್ಲಿ ಭಾಗಿಯಾದ ಇಬ್ಬರು ಅಪ್ರಾಪ್ತರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಪುಣಚ ಗ್ರಾಮದ ಪಾಲಸ್ತಡ್ಕ ನಿವಾಸಿ ಆನಂದ ಗೌಡ ಅವರ ಪತ್ನಿಯ ಹೆಸರಿನಲ್ಲಿರುವ ಇಂಡೆಸ್ಟ್ರೀಸ್ ಇಂಟರ್ ಲಾಕ್ ಘಟಕದಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಲಾಗಿತ್ತು. ಸಂಜೆ 6 ಗಂಟೆ ಸುಮಾರಿಗೆ ಆನಂದ ಗೌಡರು ಘಟಕವನ್ನು ಪರಿಶೀಲಿಸಲು ತೆರಳಿದಾಗ, ಘಟಕದ ಬಾಗಿಲನ್ನು ಮುರಿದು ಅಕ್ರಮವಾಗಿ ಪ್ರವೇಶಿಸಿದ್ದು, ಎರಡು ಸಿಸಿ ಕ್ಯಾಮರಗಳನ್ನು ನಾಶಮಾಡಿದ್ದಾರೆ. ದೇವರ ಫೋಟೋ ಮತ್ತು ಸಿಸಿ ಕ್ಯಾಮರಾದ ಡಿವಿಆರ್ ಗಳನ್ನು ಸುಟ್ಟಿದ್ದಾರೆ.

ಆನಂದ ಗೌಡರವರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಡಿವಿಆರ್ ಸುಟ್ಟು ಹೋಗಿದ್ದರೂ ಮಾಲೀಕರ ಮೊಬೈಲ್ ಗೆ ಸಿಸಿಟಿವಿ ಸಂಪರ್ಕ ಇದ್ದುದರಿಂದ ಅದನ್ನು ಪರಿಶೀಲಿಸಿ, ಕೃತ್ಯವೆಸಗಿದ್ದ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದ ಪೊಲೀಸರು ಪೋಷಕರ ಸಮಕ್ಷಮದಲ್ಲಿ ವಿಚಾರಣೆ ನಡೆಸಿದಾಗ ತಪ್ಪು ಒಪ್ಪಿಕೊಂಡಿದ್ದಾರೆ. ಬಳಿದ ಬಾಲಕರನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
























