ಭದ್ರತೆಗೆ ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜನೆ
ಚೆನ್ನೈ: ಶನಿವಾರ ರಾತ್ರಿ ಕರೂರಿನ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಬೆನ್ನಲ್ಲೇ ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದಿದೆ.
ಚೆನ್ನೈಯಲ್ಲಿರುವ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಸ್ಥಳೀಯ ಚೆನ್ನೈ ನಗರ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಮನೆಯ ಸುತ್ತಲೂ ನಿಯೋಜಿಸಲಾಗಿದೆ. ಕಾಲ್ತುಳಿತದಲ್ಲಿ ಸಾವುನೋವು ಸಂಭವಿಸಿದ ಹಿನ್ನೆಲೆ ಶನಿವಾರ ಮಧ್ಯರಾತ್ರಿಯಿಂದಲೇ ವಿಜಯ್ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಬೆದರಿಕೆ ಬಂದ ಹಿನ್ನೆಲೆ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳಗಳಿಂದ ಮನೆಯ ಸುತ್ತಲೂ ಹಾಗೂ ಮನೆಯ ಒಳಾಂಗಣವನ್ನ ಪರಿಶೀಲನೆ ಮಾಡಲಾಗಿದೆ.
ತಮಿಳುನಾಡು ರಾಜಕೀಯ ಪ್ರವೇಶಿಸಿರುವ ನಟ ದಳಪತಿ ವಿಜಯ್ ಕರೂರು ಜಿಲ್ಲಾ ಕೇಂದ್ರದ 2 ಕಿ.ಮೀ. ದೂರದ ವೇಲುಸ್ವಾಮಿಪುರಂನ ಹೆದ್ದಾರಿಯಲ್ಲಿ ಚುನಾವಣಾ ಸಭೆ ಹಮ್ಮಿಕೊಂಡಿದ್ದರು. ಶನಿವಾರ ರಾತ್ರಿ 7.15 ಸುಮಾರಿಗೆ ಈ ಸಭೆಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಪೈಕಿ 2 ವರ್ಷದ ಮಗು ಸೇರಿ 10 ಮಕ್ಕಳು, 17 ಮಹಿಳೆಯರೂ ಸೇರಿದ್ದಾರೆ. ಮೃತ 28 ಜನ ಕರೂರು ಜಿಲ್ಲೆಯವರಾಗಿದ್ದರೆ ಉಳಿದವರು ಈರೋಡ್, ತಿರುಪುರ, ಧಾರಾಪುರಂ, ಸೇಲಂ ಜಿಲ್ಲೆಯವರಾಗಿದ್ದಾರೆ.
ಎಲ್ಲಾ 40 ಜನರ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಯೇ ಸಾವನ್ನಪ್ಪಿರುವುದು ದೃಢವಾಗಿದೆ. ಮೃತರಿಗೆ ವಿಜಯ್ 20 ಲಕ್ಷ, ಗಾಯಾಳುಗಳಿಗೆ 2 ಲಕ್ಷ ಪರಿಹಾರ ಘೋಷಿಸಿದರೆ, ಸಿಎಂ ಸ್ಟಾಲಿನ್ ಅವರು ಮೃತರಿಗೆ 10 ಲಕ್ಷ ಹಾಗೂ ಗಾಯಾಳುಗಳಿಗೆ 1 ಲಕ್ಷ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಕೂಡ ಮೃತರಿಗೆ 2 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ಪರಿಹಾರ ಪ್ರಕಟಿಸಿದ್ದಾರೆ. ತಮಿಳುನಾಡು ಬಿಜೆಪಿ ಕೂಡ 1 ಲಕ್ಷ ಪರಿಹಾರ ಪ್ರಕಟಿಸಿದೆ.
























