ಏಷ್ಯಾಕಪ್‌ ಫೈನಲ್‌ : ಚಾಂಪಿಯನ್‌ ಆದರೂ ಟ್ರೋಫಿ ಇಲ್ಲದೆ ಸಂಭ್ರಮಿಸಿದ ಟೀಂ ಇಂಡಿಯಾ

ದುಬೈಯಲ್ಲಿ ಭಾರತಕ್ಕೆ ತಿಲಕ್‌ ವರ್ಮಾ ಸಿಂದೂರ ತಿಲಕ – ಮಣ್ಣು ಮುಕ್ಕಿದ ಪಾಕ್‌

ದುಬೈ : ಭಾನುವಾರ ರಾತ್ರಿ ದುಬೈಯಲ್ಲಿ ನಡೆದ ರಣರೋಚಕ ಏಷ್ಯಾಕಪ್‌ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಟೀಮ್ ಇಂಡಿಯಾ 9ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ ಚಾಂಪಿಯನ್ ಆದರೂ ಭಾರತ ತಂಡ ಏಷ್ಯಾಕಪ್ ಟ್ರೋಫಿ ಸ್ವೀಕರಿಸಿಲ್ಲ. ಈ ಬಾರಿ ಏಷ್ಯಾಕಪ್ ಟ್ರೋಫಿಯನ್ನು ಎತ್ತಿಹಿಡಿಯದೆ ಟೀಮ್ ಇಂಡಿಯಾ ಸಂಭ್ರಮಿಸಿದೆ. ಇದಕ್ಕೆ ಮುಖ್ಯ ಕಾರಣ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಪಾಕಿಸ್ತಾನದವರಾಗಿರುವುದು. ಈ ಮೂಲಕ ಪಾಕಿಸ್ತಾನಕ್ಕೆ ಭಾರತದ ಹುಡುಗರು ಮತ್ತೊಮ್ಮೆ ಘೋರ ಅವಮಾನ ಮಾಡಿದ್ದಾರೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ. ಅಷ್ಟೇ ಅಲ್ಲದೆ ಪಾಕಿಸ್ತಾನ ಸರ್ಕಾರದ ಆಂತರಿಕ ವ್ಯವಹಾರಗಳ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಟೀಮ್ ಇಂಡಿಯಾ ನಿರಾಕರಿಸಿದೆ. ಇದಕ್ಕೂ ಮುನ್ನ ಪಹಲ್ಗಾಮ್ ದಾಳಿಯನ್ನು ಖಂಡಿಸಿ ಟೀಮ್ ಇಂಡಿಯಾ ಆಟಗಾರರು ಪಾಕ್ ಪ್ಲೇಯರ್ಸ್​ ಜೊತೆ ಹ್ಯಾಂಡ್ ಶೇಕ್ ಮಾಡಿರಲಿಲ್ಲ. ಇದೇ ನಿಲುವನ್ನು ಮುಂದುವರಿಸಿ ಪಾಕ್ ವ್ಯಕ್ತಿಯಿಂದ ಏಷ್ಯಾಕಪ್ ಪಡೆಯಲು ನಿರಾಕರಿಸಿದ್ದಾರೆ. ಇದರಿಂದ ಇದೀಗ ಪಾಕಿಸ್ತಾನ ಭಾರಿ ಮುಖಭಂಗ ಅನುಭವಿಸಿದೆ.





















































 
 

ಭಾರತ ತಂಡ ಟ್ರೋಫಿ ಇಲ್ಲದೆ ಸಂಭ್ರಮಾಚರಣೆ ಮಾಡಿ ಗಮನ ಸೆಳೆದಿದೆ. ಟ್ರೋಫಿ ಇಲ್ಲದೆ ಟೀಮ್ ಇಂಡಿಯಾ ಸೆಲೆಬ್ರೇಷನ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರತ ತಂಡದ ಈ ನಡೆಗೆ ಟೀಮ್ ಇಂಡಿಯಾ ಕ್ರಿಕೆಟ್ ಪ್ರೇಮಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ 41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಿತು. ಆರಂಭದಲ್ಲಿ ಭಾರತ ವಿಕೆಟ್‌ ಕಳೆದುಕೊಂಡಿದ್ದರೂ ತಿಲಕ್‌ ವರ್ಮಾ ಅವರ ಸ್ಫೋಟಕ ಅರ್ಧ ಶತಕದ ಆಟದಿಂದ ಏಷ್ಯಾಕಪ್‌ ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ 9ನೇ ಬಾರಿ ಭಾರತ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ.

ರಣರೋಚಕ ಫೈನಲ್‌

ಫೈನಲ್‌ ಹೈವೋಲ್ಟೇಜ್‌ ಪಂದ್ಯ ರೋಚಕತೆಯಿಂದ ಕೂಡಿತ್ತು. ಕೊನೆಯ 7 ಬಾಲ್‌ಗೆ 10 ರನ್‌ ಬೇಕಾಗಿತ್ತು. ಫಹೀಮ್ ಅಶ್ರಫ್‌ ಕೊನೆ ಎಸೆತಕ್ಕೆ ಸಿಕ್ಸರ್‌ ಹೊಡೆಯಲು ಮುಂದಾಗಿ ಶಿವಂ ದುಬೆ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ನೀಡಿ ನಿರ್ಗಮಿಸಿದ್ದು ಭಾರತೀಯರಿಗೆ ಅರೆಕ್ಷಣ ಶಾಕ್‌ ನೀಡಿತು. ಕೊನೆ ಓವರ್‌ನಲ್ಲಿ 10 ರನ್‌ ಬೇಕಿತ್ತು. ಆಗ ತಿಲಕ್‌ ವರ್ಮಾಗೆ ರಿಂಕು ಸಿಂಗ್‌ ಜೊತೆಯಾದರು. ಲಾಸ್ಟ್‌ ಓವರ್‌ನ ಮೊದಲ ಬಾಲ್‌ಗೆ ತಿಲಕ್‌ 2 ರನ್‌ ಗಳಿಸಿದರು. ಮತ್ತೆ ಸಿಕ್ಸರ್‌ ಬಾರಿಸಿದರು. 3ನೇ ಬಾಲ್‌ಗೆ ಸಿಂಗಲ್‌ ಬಂತು. 4ನೇ ಬಾಲ್‌ಗೆ ರಿಂಗ್‌ ಸಿಂಗ್‌ ಫೋರ್‌ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಆಪರೇಷನ್‌ ಸಿಂದೂರದಂತಿದ್ದ ಮೈದಾನದಲ್ಲಿ ಟೀಂ ಇಂಡಿಯಾ ಕೊನೆಗೂ ಗೆದ್ದು ಬೀಗಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ 19.1 ಓವರ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸಿತು. ನಂತರ ಬ್ಯಾಟಿಂಗ್‌ ಮಾಡಿದ ಭಾರತ 19.4 ಬಾಲ್‌ಗೆ ಗುರಿ ತಲುಪಿ ಗೆದ್ದು ಬೀಗಿತು.

ಟೀಂ ಇಂಡಿಯಾ ಬ್ಯಾಟಿಂಗ್‌ ವೇಳೆ ಆರಂಭಿಕ ಆಘಾತಗಳನ್ನು ನೀಡಿತು. ಟೂರ್ನಿಯ ಕಳೆದ ಪಂದ್ಯಗಳಲ್ಲಿ ಅಬ್ಬರಿಸಿದ್ದ ಅಭಿಷೇಕ್‌ ವರ್ಮಾ ಹೈವೋಲ್ಟೇಜ್‌ ಪಂದ್ಯದಲ್ಲಿ ಕೇವಲ 5 ರನ್‌ ಗಳಿಸಿ ಕ್ಯಾಚ್‌ ನೀಡಿ ನಿರ್ಗಮಿಸಿದ್ದು, ಆಘಾತ ನೀಡಿತು. ಹೀಗಿರುವಾಗಲೇ ಕೇವಲ 1 ರನ್‌ಗೆ ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ ಔಟಾಗಿದ್ದು ತಂಡಕ್ಕೆ ಬರಸಿಡಿಲು ಬಡಿದಂತಾಯಿತು. ಶುಭಮನ್‌ ಗಿಲ್‌ ಕೂಡ ದೊಡ್ಡ ಹೊಡೆತಕ್ಕೆ ಮುಂದಾಗಿ 12 ರನ್‌ ಗಳಿಸಿ ನಿರ್ಗಮಿಸಿದರು. ತಂಡವು ಕೇವಲ 20 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತ್ತು.

ಆಗ ತಂಡಕ್ಕೆ ತಿಲಕ್‌ ವರ್ಮಾ ನೆರವಾಗಿ ಜವಾಬ್ದಾರಿಯುತ ಆಟವಾಡಿದರು. ಅವರಿಗೆ ಸಂಜು ಸ್ಯಾಮ್ಸನ್‌ ಸಾಥ್‌ ನೀಡಿದರು. ನಿಧಾನಗತಿಯ ಆಟದ ಮೂಲಕ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತು ಈ ಮಧ್ಯೆ 24 ರನ್‌ಗಳಿಸಿ ಸ್ಯಾಮ್ಸನ್‌ ಔಟಾದರು. ಆಗ ತಿಲಕ್‌ಗೆ ಶಿವಂ ದುಬೆ ಜೊತೆಯಾದರು. ಈ ಜೋಡಿ 64 ರನ್‌ಗಳ ಜೊತೆಯಾಟವಾಡಿತು. ತಿಲಕ್ ಅರ್ಧಶತಕ ಸಿಡಿಸಿದರು. ಸಿಕ್ಸರ್‌, ಫೋರ್‌ಗಳ ಸುರಿಮಳೆ ಹರಿದುಬಂತು. ಇವರಿಬ್ಬರ ಜವಾಬ್ದಾರಿಯುತ ಆಟ ತಂಡದ ಗೆಲುವಿಗೆ ಕೊಡುಗೆ ನೀಡಿತು. ತಿಲಕ್‌ ವರ್ಮಾ ಔಟಾಗದೇ 69 ರನ್‌ ಸಿಡಿಸಿ ಆಪದ್ಬಾಂಧವನಂತೆ ಕಂಡರು. ಕೊನೆಗೆ ಭಾರತ ತಂಡ ಪಾಕ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ ಏಷ್ಯಾ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಟೀಂ ಇಂಡಿಯಾ ಪರ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಜಾದೂ ಮಾಡಿ ನಾಲ್ಕು ವಿಕೆಟ್‌ ಕಿತ್ತು ಮಿಂಚಿದರು. ಜಸ್ಪ್ರಿತ್‌ ಬುಮ್ರಾ, ವರುಣ್‌ ಚಕ್ರವರ್ತಿ, ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌ ಕಿತ್ತರು.

ಇಡೀ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಯಾವ ರೀತಿಯ ಮೇಲುಗೈ ಸಾಧಿಸಿತ್ತೋ ಅದೇ ರೀತಿ ಫೈನಲ್ ಪಂದ್ಯದಲ್ಲೂ ಪಾಕಿಸ್ತಾನದ ವಿರುದ್ಧ ವಿರೋಚಿತ ಪ್ರದರ್ಶನ ನೀಡಿ ಏಷ್ಯನ್ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಟೀಂ ಇಂಡಿಯಾ ದಾಖಲೆಯ 9ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್‌ ಆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 19.1 ಓವರ್​ಗಳಲ್ಲಿ 146 ರನ್​ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ 5 ವಿಕೆಟ್ ಕಳೆದುಕೊಂಡು ಕೊನೆಯ ಓವರ್​​ನಲ್ಲಿ ಗೆಲುವು ಸಾಧಿಸಿತು.

ಪಾಕಿಸ್ತಾನಕ್ಕೆ ಉತ್ತಮ ಆರಂಭ

ಫೈನಲ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಬಲಿಷ್ಠ ಆರಂಭ ಸಿಕ್ಕಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಪರ ಆರಂಭಿಕ ಆಟಗಾರರಾದ ಸಾಹಿಬ್‌ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಆಕ್ರಮಣಕಾರಿ ಇನ್ನಿಂಗ್ಸ್‌ನೊಂದಿಗೆ ಉತ್ತಮ ಆರಂಭವನ್ನು ನೀಡಿದರು. ಫರ್ಹಾನ್ ಮತ್ತೊಮ್ಮೆ ಜಸ್ಪ್ರೀತ್ ಬುಮ್ರಾ ಅವರನ್ನು ಗುರಿಯಾಗಿಸಿಕೊಂಡು ಕೇವಲ 38 ಎಸೆತಗಳಲ್ಲಿ 57 ರನ್ ಬಾರಿಸಿದರು. ಅಲ್ಲದೆ ಫರ್ಹಾನ್ ಮತ್ತು ಫಖರ್ ಮೊದಲ ವಿಕೆಟ್​ಗೆ 84 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ಹಂಚಿಕೊಂಡರು. ನಂತರ ಫಖರ್ ಜಮಾನ್ ಜವಾಬ್ದಾರಿ ವಹಿಸಿಕೊಂಡು ತಂಡವನ್ನು 100ರ ಗಡಿ ದಾಟಿಸಿದರು.

ಒಂದೇ ಓವರ್​​ನಲ್ಲಿ 3 ವಿಕೆಟ್ ಉರುಳಿಸಿದ ಕುಲ್ದೀಪ್

ಆದರೆ ಕುಲ್ದೀಪ್ ಯಾದವ್ ದಾಳಿಗಿಳಿದ ಬಳಿಕ ಪಂದ್ಯದ ಚಿತ್ರಣವೇ ಬದಲಾಯಿತು. 13ನೇ ಓವರ್‌ನಲ್ಲಿ ಸೈಮ್ ಅಯೂಬ್ ಅವರನ್ನು ಕುಲ್ದೀಪ್ ಔಟ್ ಮಾಡಿದರು. ಇದರೊಂದಿಗೆ ಪಾಕಿಸ್ತಾನ 113 ರನ್​ಗಳಿಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. ಅಲ್ಲಿಂದ, ಮುಂದಿನ ಐದು ಓವರ್‌ಗಳಲ್ಲಿ ಪಾಕಿಸ್ತಾನ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡು ಕೇವಲ 146 ರನ್‌ಗಳಿಗೆ ಆಲೌಟ್ ಆಯಿತು. 17ನೇ ಓವರ್‌ನಲ್ಲಿ ಕುಲ್ದೀಪ್ ಕೇವಲ ಒಂದು ರನ್‌ ನೀಡಿ ಮೂರು ವಿಕೆಟ್‌ಗಳನ್ನು ಪಡೆದರು. ಉಳಿದಂತೆ ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಮತ್ತು ಬುಮ್ರಾ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಪ್ರಧಾನಿ ಮೋದಿಯಿಂದ ಅಭಿನಂದನೆ

ಟೀಂ ಇಂಡಿಯಾದ ಗೆಲುವಿನಿಂದ ದೇಶಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೂರು ಸಾಲುಗಳ ಪೋಸ್ಟ್‌ನೊಂದಿಗೆ ಟೀಂ ಇಂಡಿಯಾವನ್ನು ಅಭಿನಂದಿಸಿದ್ದಾರೆ. ಪ್ರಧಾನಿ ಮೋದಿ ತಮ್ಮ ಪೋಸ್ಟ್‌ನಲ್ಲಿ, ‘ಮೈದಾನದಲ್ಲಿ ಆಪರೇಷನ್ ಸಿಂದೂರ್. ಫಲಿತಾಂಶ ಒಂದೇ: ಭಾರತಕ್ಕೆ ಜಯ. ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.

error: Content is protected !!
Scroll to Top