ಪುತ್ತೂರು: ಎವಿಜಿ ಸಮೂಹ ಸಂಸ್ಥೆಗಳಿಂದ ಪ್ರವರ್ತಿತ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಲೋಕಾರ್ಪಣೆ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ನಟರಾಜ’ ವೇದಿಕೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜರುಗಿತು.
ಪೂರ್ವಾಹ್ನ ಗಂಟೆ 9.30ಕ್ಕೆ ಖಾಸಗಿ ಬಸ್ ನಿಲ್ದಾಣದ ಎದುರಿನ ಕಚೇರಿಯಲ್ಲಿ ಉದ್ಘಾಟನ ಕಾರ್ಯಗಳು ನಡೆದಾಗ ಬೆಂಗಳೂರಿನ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ. ಗಂಗಾಧರ ಅವರು ಕಚೇರಿಯ ಉದ್ಘಾಟನೆ, ಮಂಗಳೂರಿನ ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷರಾದ ಭಾಸ್ಕರ ದೇವಸ್ಯ ಅವರು ಅಧ್ಯಕ್ಷರ ಕೊಠಡಿಯ ಉದ್ಘಾಟನೆ, ಪುತ್ತೂರಿನ ಪೂರ್ವ ಶಾಸಕರಾದ ಸಂಜೀವ ಮಠಂದೂರು ಅವರು ಭದ್ರತಾ ಕೋಶದ ಉದ್ಘಾಟನೆ ಮತ್ತು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಗಣಕಯಂತ್ರದ ಉದ್ಘಾಟನೆಗಳನ್ನು ನೆರವೇರಿಸಿದರು.

ಸಭಾ ಕಾರ್ಯಕ್ರಮ
ಬಳಿಕ ಪೂರ್ವಾಹ್ನ ಗಂಟೆ 10.00ರಿಂದ ಸೊಸೈಟಿಯ ಅಧ್ಯಕ್ಷರಾದ ಕಳುವಾಜೆ ವೆಂಕಟ್ರಮಣ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆಯ ಅಧ್ಯಕ್ಷೆಯವರಾದ ಲೀಲಾವತಿ ಅಣ್ಣು ನಾಯ್ಕ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡುವುದರೊಂದಿಗೆ ಪ್ರಥಮ ಸಾಲ ಪತ್ರ ವಿತರಣೆಯನ್ನು ಮಾಡಿದರು. ಶ್ರೀ ವೀರಪ್ಪ ಗೌಡರು ಮೊದಲ ಸಾಲವನ್ನು ಪಡೆದುಕೊಂಡರು.
ಪುತ್ತೂರಿನ ಜನಪ್ರಿಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈಯವರು ಸಂಸ್ಥೆಯ ಲಾಂಛನವನ್ನು ಬಿಡುಗಡೆ ಮಾಡಿ ಶುಭ ಹಾರೈಸುತ್ತಾ ಇಂದು ಸಹಕಾರಿ ಸಂಸ್ಥೆಗಳ ಸಂಖ್ಯೆ ಜಾಸ್ತಿ ಆಗುತ್ತಿದೆ ಎಂದರೆ ಪುತ್ತೂರಿನಲ್ಲಿ ಆರ್ಥಿಕ ಅಭಿವೃದ್ಧಿ ಏರುಮುಖಿಯಾಗಿದೆ ಎಂದರ್ಥ ಎಂದು ಪ್ರತಿಪಾದಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಸಿ.ಜೆ. ಗಂಗಾಧರ ಅವರು ಮಾತನಾಡಿ ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳು ಏಕೆ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಪ್ರಸ್ತುತಪಡಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಪೂರ್ವ ಶಾಸಕರಾದ ಸಂಜೀವ ಮಠಂದೂರರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಗೂ ಸಹಕಾರ ಕ್ಷೇತ್ರದ ಹುಟ್ಟಿಗೂ ಇರುವ ನಂಟನ್ನು ಸ್ಮರಿಸಿಕೊಂಡು ಪುತ್ತೂರು ಏಕೆ ಶ್ರೇಷ್ಠ ಎಂಬುದನ್ನು ಹೇಳುತ್ತಾ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರು ಪುತ್ತೂರಿನಲ್ಲಿ ಮತ್ತು ಜಿಲ್ಲೆಯ ಇತರೆಡೆಗಳಲ್ಲಿ ಆರಂಭಿಸಿದ ಸಹಕಾರಿ ಚಳುವಳಿಯ ಬಗ್ಗೆ ಹೇಳಿದರು.
ಎಸ್.ಡಿ.ಸಿ.ಸಿ. ಬ್ಯಾಂಕ್ನ ನಿರ್ದೇಶಕರೂ, ಎವಿಜಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಸ್ತುವಾರಿ ಜಿಲ್ಲಾ ಬ್ಯಾಂಕ್ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಎವಿಜಿ ಸೊಸೈಟಿಯ ದೂರದರ್ಶಿತ್ವವನ್ನು ಶ್ಲಾಘಿಸಿದರು.
ಸೊಸೈಟಿಯ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಿದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಎವಿಜಿ ಸಂಸ್ಥೆಯು ಅತ್ಯುತ್ತಮ ಆಡಳಿತ ಮಂಡಳಿಯನ್ನು ಹೊಂದಿದ್ದು ಇದು ಯಶ ಕಾಣುವುದರಲ್ಲಿ ಸಂಶಯವಿಲ್ಲ ಎಂದು ಹೇಳಿ ನಾವೆಲ್ಲರೂ ಸಂಸ್ಥೆಗೆ ಗರಿಷ್ಠ ಬೆಂಬಲವನ್ನು ನೀಡುವುದು ಕರ್ತವ್ಯವಾಗಿದೆ ಎಂದರು.
ಪ್ರಥಮ ಠೇವಣಿ ಪತ್ರವನ್ನು ವಿತರಿಸಿದ ಪುತ್ತೂರು ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾದ ರವಿ ಮುಂಗ್ಲಿಮನೆ ಸಂಸ್ಥೆಗೆ ಶುಭ ಕೋರಿ ಪುತ್ತೂರಿನ ಎವಿಜಿ ಸುಳ್ಯದ ಕೆವಿಜಿ ಮಾದರಿಯಲ್ಲಿ ಬೆಳಗಲಿ ಎಂದರು. ಸುಳ್ಯದ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದಯಾಮಣಿ ಉಮೇಶ್ ಅವರು ಪ್ರಥಮ ಠೇವಣಿ ಇರಿಸಿ ಪ್ರಮಾಣಪತ್ರ ಪಡೆದುಕೊಂಡರು.
ಮುಖ್ಯ ಅತಿಥಿಯವರಾಗಿ ಆಗಮಿಸಿದ್ದ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿಯವರು ಮತ್ತು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿಯವರು ಶುಭ ಹಾರೈಸಿದರು.
ಸಭಾಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರು ಮಾತನಾಡಿ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅವರು ಪೇಟೆಗೆ ಬಂದಾಗ ಜನರು ಹೇಗೆ ಅವರನ್ನು ಸ್ವೀಕರಿಸುತ್ತಾರೆ ಎಂಬ ಅಳುಕು ಇದ್ದರೂ ಪುತ್ತೂರಿನಲ್ಲಿ ಅವರಿಗೆ ಅದ್ಭುತ ಜನಬೆಂಬಲ ದೊರಕಿದೆ ಎಂದರು. ಆ ಕಾರಣಕ್ಕಾಗಿಯೇ ಅವರು ಎವಿಜಿ ಸೊಸೈಟಿಯನ್ನು ರೂಪಿಸುವ ಯೋಜನೆಗೆ ಪೂರಕವಾಗಿ ಕೆಲಸ ಮಾಡಿದರು ಎಂದು ಹೇಳಿ ಈ ಸಂಸ್ಥೆಯ ಹುಟ್ಟಿನ ಹಿಂದೆ ಎ.ವಿ. ನಾರಾಯಣರ ಶ್ರಮವಿರುವುದನ್ನು ಗುರುತಿಸಿದರು.
ಒಕ್ಕಲಿಗ ಟ್ರಸ್ಟ್ಗೆ ದೇಣಿಗೆ
ಸೊಸೈಟಿಗೆ ಸರ್ವರೀತಿಯಲ್ಲಿ ಸಹಕಾರ ನಿಡುತ್ತಿರುವ ಒಕ್ಕಲಿಗ ಟ್ರಸ್ಟ್ ಪುತ್ತೂರು ಸಂಸ್ಥೆಗೆ ರೂ. 5,000/- ಮೌಲ್ಯದ ಪೀಠೋಪಕರಣವನ್ನು ನೀಡಲಾಯಿತು.
ಸಮಯದ ಪರಿಪಾಲನೆ
ಅಪರಾಹ್ನ ಗಂಟೆ 1ಕ್ಕೆ ಮುಗಿಯಬೇಕಾಗಿದ್ದ ಸಭಾಕಾರ್ಯಕ್ರಮವನ್ನು 15 ನಿಮಿಷಗಳು ಮುಂಚಿತವಾಗಿ, 12.45ಕ್ಕೆ ಮುಗಿಸಿದ್ದು ವಿಶೇಷವಾಗಿತ್ತು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಠೇವಣಿದಾರರ ನೋಂದಣಿ
ಸುಮಾರು 40ಕ್ಕೂ ಮಿಕ್ಕಿದ ಸಭಾಸದರು ಠೇವಣಿ ಇರಿಸುವುದಕ್ಕಾಗಿ ನೋಂದಣಿಯನ್ನು ಮಾಡಿಕೊಂಡದ್ದು ಮತ್ತು ಸುಮಾರು 62 ಮಂದಿ ಸಾಲದ ಬೇಡಿಕೆ ಇಟ್ಟು ನೋಂದಣಿ ಮಾಡಿಕೊಂಡದ್ದು ಅತಿ ವಿಶೇಷವಾಗಿತ್ತು. ಇದು ಸಂಸ್ಥೆಯ ಪ್ರಗತಿಗೆ ಇನ್ನಷ್ಟು ಹೆಚ್ಚು ಇಂಬು ನೀಡುವ ಮುನ್ಸೂಚನೆಯಾಗಿತ್ತು.
ಮುಖ್ಯ ಪ್ರವರ್ತಕರಾದ ಎ.ವಿ. ನಾರಾಯಣರು ಪ್ರಸ್ತಾವನೆಗೈದು ಎಲ್ಲರನ್ನೂ ಸ್ವಾಗತಿಸಿದ ಸಭಾಕಾರ್ಯಕ್ರಮದಲ್ಲಿ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಶಿಕ್ಷಕಿ ಶ್ವೇತಾ ಪ್ರಾರ್ಥನೆ, ಸೊಸೈಟಿಯ ಉಪಾಧ್ಯಕ್ಷ ಉಮೇಶ್ ಮಳುವೇಲು ವಂದನಾರ್ಪಣೆಗಳನ್ನು ನೆರವೇರಿಸಿದರು. ಎಲ್ಲಾ ನಿರ್ದೇಶಕರನ್ನು ಸೊಸೈಟಿಯ ಅಧ್ಯಕ್ಷರು ಶಾಲು ಹಾಕಿ ಗೌರವಿಸಿದರು.
ರಾಷ್ಟ್ರಗೀತೆಯೊಂದಿಗೆ ಮುಕ್ತಾಯಕಂಡ ಕಾರ್ಯಕ್ರಮದಲ್ಲಿ ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಪ್ರಾಂಶುಪಾಲ ಅಮರನಾಥ್ ಪಟ್ಟಿ ಮತ್ತು ಸಿಬ್ಬಂದಿ ಹಾಗೂ ಎವಿಜಿ ಅಸೋಸಿಯೇಟ್ಸ್ನ ಸಿಬ್ಬಂದಿಗಳು ಸಂಪೂರ್ಣ ಸೇವೆಯನ್ನು ನೀಡಿದರು. ನಿರ್ದೇಶಕರುಗಳಾದ ಗುಡ್ಡಪ್ಪ ಗೌಡ ಬಲ್ಯ, ಸೀತಾರಾಮ ಕೇವಳ, ಗಂಗಯ್ಯ ಗೌಡ ತಾಳಿಪಡ್ಪು, ಜಯಪ್ರಕಾಶ್ ಕಳುವಾಜೆ, ಹಲಂಗ ಸುಂದರ ಗೌಡ, ಗಂಗಾಧರ ಎ.ವಿ., ಪದ್ಮಪ್ಪ ಗೌಡ ಕೆ., ಕೆ. ಮಾಧವ ಗೌಡ ಪೆರಿಯತ್ತೋಡಿ, ಮೋಹನ ಜಿ., ವೇದಾವತಿ ಶೀನಪ್ಪ ಗೌಡ ಬೈತ್ತಡ್ಕ ಮತ್ತು ಉಷಾಲಕ್ಷ್ಮೀ ಉಮೇಶ್ ಅವರು ವಿವಿಧ ಕಾರ್ಯಗಳಲ್ಲಿ ಸಹಕರಿಸಿದರು. ವಸಂತ ವೀರಮಂಗಲ ಮತ್ತು ಪ್ರತಿಭಾದೇವಿ ನಾರಾಯಣ ಕಾರ್ಯಕ್ರಮಗಳನ್ನು ನಿರೂಪಿಸಿದರು.
























