39 ಜನರ ಪ್ರಾಣಕ್ಕೆ ಎರವಾದ ಸೌಲಭ್ಯಗಳ ಕೊರತೆ

ವಿಜಯ್‌ ರ‍್ಯಾಲಿಯಲ್ಲಿ ನೀರು, ಊಟದ ಕನಿಷ್ಠ ವ್ಯವಸ್ಥೆಯೂ ಇರಲಿಲ್ಲ

ಚೆನ್ನೈ : ತಮಿಳುನಾಡಿನ ಕರೂರ್‌ನಲ್ಲಿ ಶನಿವಾರ ನಟ ವಿಜಯ್ ಅವರ ರಾಜಕೀಯ ರ‍್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 39ಕ್ಕೇರಿದ್ದು, 100 ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 39 ಜನರ ಸಾವಿಗೆ ಕಾರಣವಾದ ಲೋಪಗಳು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಈ ನಡುವೆ ನಟ ದುರಂತದಲ್ಲಿ ಮೃತಪಟ್ಟ ಎಲ್ಲ 39 ಮಂದಿಯ ಪರಿವಾರಗಳಿಗೆ ತಲಾ 20 ಲ.ರೂ. ಪರಿಹಾರ ಕೊಡುವುದಾಗಿ ಘೋಷಿಸಿದ್ದಾರೆ.

ಶನಿವಾರ ಮಧ್ಯಾಹ್ನ 3 ಗಂಟೆಗೆ ಕರೂರಿನಲ್ಲಿ ವಿಜಯ್ ರ‍್ಯಾಲಿ ಆರಂಭವಾಗಬೇಕಿತ್ತು. ವಿಜಯ್ ಅವರನ್ನು ನೋಡುವ ಸಲುವಾಗಿ ಬೆಳಗ್ಗಿನಿಂದಲೇ ಆ ಜಾಗಕ್ಕೆ ಸಾವಿರಾರು ಜನರು ಆಗಮಿಸತೊಡಗಿದ್ದರು. ಆದರೆ, ವಿಜಯ್ ಸಮಯಕ್ಕೆ ಸರಿಯಾಗಿ ಬರಲಿಲ್ಲ. 3 ಗಂಟೆಗೆ ಬರಬೇಕಾಗಿದ್ದ ವಿಜಯ್ ಕರೂರಿಗೆ ಬರುವಾಗ ರಾತ್ರಿ ಏಳೂವರೆಯಾಗಿತ್ತು.





















































 
 

ಬೆಳಗ್ಗೆಯಿಂದ ವಿಜಯ್​​ಗಾಗಿ ಕಾದು ಕುಳಿತಿದ್ದ ಜನರಿಗೆ ಅವರ ರಾಜಕೀಯ ಪಕ್ಷ ಟಿವಿಕೆಯಿಂದ ಊಟದ ವ್ಯವಸ್ಥೆ ಹಾಗಿರಲಿ ಕುಡಿಯಲು ನೀರಿನ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಊಟ, ನೀರು ಇಲ್ಲದೆ ಉರಿ ಬಿಸಿಲಿನಲ್ಲಿ ನಿಂತು ಕಾದಿದ್ದರಿಂದ ಬಹುತೇಕ ಜನರು ಸುಸ್ತಾಗಿದ್ದರು. ಆದರೂ ತಮ್ಮ ನೆಚ್ಚಿನ ನಟನನ್ನು ನೋಡಲೆಂದು ಜನರು ಹೆಂಡತಿ, ಮಕ್ಕಳ ಸಮೇತ ಕರೂರಿಗೆ ಬಂದಿದ್ದರು. ವಿಜಯ್ ರಾತ್ರಿ ತೆರೆದ ವಾಹನವನ್ನೇರಿ ಭಾಷಣ ಶುರು ಮಾಡುತ್ತಿದ್ದಂತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ನೂಕುನುಗ್ಗಲು ಉಂಟಾಯಿತು. ಈ ವೇಳೆ ಕೆಲವು ಮಕ್ಕಳು ಅಪ್ಪ-ಅಮ್ಮನ ಕೈತಪ್ಪಿ ಹೋದರು. ಇದರಿಂದ ಆ ಸ್ಥಳದಲ್ಲಿ ಗೊಂದಲ ಉಂಟಾಯಿತು. ಇನ್ನು ಕೆಲವರು ತಳ್ಳಾಟದಿಂದ ಉಸಿರಾಡಲು ಸಾಧ್ಯವಾಗದೆ ಮೂರ್ಚೆ ತಪ್ಪಿ ಬಿದ್ದರು.

ವಿಜಯ್ ಕೂಡಲೇ ವೇದಿಕೆಯ ಮೇಲಿಂದ ಸಭಿಕರತ್ತ ನೀರಿನ ಬಾಟಲಿ ಎಸೆದು ನೀರು ಕುಡಿಸಲು ಹೇಳಿದರು. ತಕ್ಷಣ ಆ್ಯಂಬುಲೆನ್ಸ್​ಗೆ ಫೋನ್ ಮಾಡಲಾಯಿತು. ಆದರೆ, ಬೆಳಗ್ಗೆಯಿಂದ ವಿಪರೀತ ನಿತ್ರಾಣವಾಗಿದ್ದ ಕಾರಣದಿಂದ ಹಾಗೂ ಕಾಲ್ತುಳಿತಕ್ಕೆ ಸಿಲುಕಿ ಗಾಯಗೊಂಡಿದ್ದರಿಂದ ಮಗು, ಮಹಿಳೆಯರು ಸೇರಿದಂತೆ 39 ಜನರು ಪ್ರಾಣ ಕಳೆದುಕೊಂಡರು.

ವಿಜಯ್ ತಡವಾಗಿ ಬಂದಿದ್ದು, ಸಭೆ ನಡೆಯುವ ಸ್ಥಳದಲ್ಲಿ ಸರಿಯಾದ ಮೂಲಸೌಲಭ್ಯ ವ್ಯವಸ್ಥೆಗಳನ್ನು ಕಲ್ಪಿಸದೆ ಇದ್ದದ್ದು ದುರಂತಕ್ಕೆ ಮೂಲ ಕಾರಣವಾಯಿತು. ಈ ರ‍್ಯಾಲಿಗೆ ವ್ಯವಸ್ಥೆ ಮಾಡಿದ್ದಕ್ಕಿಂತ ಹಲವು ಪಟ್ಟು ಹೆಚ್ಚು ಜನರು ಆಗಮಿಸಿದ್ದರು. ಅದಕ್ಕೆ ಸರಿಯಾಗಿ ಕುರ್ಚಿಯ ವ್ಯವಸ್ಥೆಯಾಗಲಿ, ಜಾಗವಾಗಲಿ ಅಲ್ಲಿ ಇರಲಿಲ್ಲ. ವಿಜಯ್ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿದ್ದು 10 ಸಾವಿರ ಜನರಿಗೆ ಮಾತ್ರ. ರ‍್ಯಾಲಿ ನಡೆದ ಜಾಗದಲ್ಲಿ ಹೆಚ್ಚೆಂದರೆ 10 ಸಾವಿರ ಜನರು ಸೇರಬಹುದಿತ್ತು. ಲಕ್ಷದಷ್ಟು ಜನರು ಅಲ್ಲಿ ಸೇರಿದ್ದರು. ಇದರಿಂದಾಗಿ ಜನರಿಗೆ ಆಚೀಚೆ ಹೋಗಲೂ ಸಾಧ್ಯವಾಗಷ್ಟು ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ರ‍್ಯಾಲಿಗೆ ಅನುಮತಿ ಕೋರಿ ಬರೆದ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಆ ಸ್ಥಳದಲ್ಲಿ ಸರಿಯಾದ ನಿರ್ವಹಣೆಯ ಕೊರತೆಯೇ ಈ ದುರಂತಕ್ಕೆ ಕಾರಣ ಎಂಬುದನ್ನು ಸಾಬೀತುಪಡಿಸಿದೆ. ಸೆಪ್ಟೆಂಬರ್ 25ರ ದಿನಾಂಕವಿರುವ ಈ ಪತ್ರವನ್ನು ಟಿವಿಕೆಯ ಕರೂರ್ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಿದ್ದಾರೆ. ವಿಜಯ್ ಅವರ ರೋಡ್ ಶೋಗೆ 10,000 ಜನರು ಹಾಜರಾಗುತ್ತಾರೆ ಎಂದು ಪಕ್ಷ ನಿರೀಕ್ಷಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಬ್ಯಾನರ್‌ಗಳು, ಅಲಂಕಾರ ಫಲಕಗಳು, ಫ್ಲೆಕ್ಸ್ ಬೋರ್ಡ್‌ಗಳು ಮತ್ತು ಸಾರ್ವಜನಿಕ ಭಾಷಣ ವ್ಯವಸ್ಥೆಗೆ ಅನುಮೋದನೆಯನ್ನೂ ಕೋರಲಾಗಿದೆ. ಟಿವಿಕೆ, ಇಂಜಿನಿಯರ್ ಸಹಾಯದಿಂದ ಲೈಟ್‌ಹೌಸ್ ರೌಂಡ್‌ಟಾನಾ ಬಳಿಯ ರ‍್ಯಾಲಿಯ ಸ್ಥಳವನ್ನು ಅಧ್ಯಯನ ಮಾಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಸರಿಯಾಗಿ ಪೊಲೀಸರು ಕೂಡ ಭದ್ರತೆಯನ್ನು ನಿಯೋಜನೆ ಮಾಡಿದ್ದರು. ಆದರೆ ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಪೊಲೀಸರಿಗೆ ಕಷ್ಟವಾಯಿತು.

error: Content is protected !!
Scroll to Top