ಗೆಲ್ಲಲೇ ಬೇಕಾದ ಒತ್ತಡದಲ್ಲಿ ಉಭಯ ತಂಡಗಳು
ದುಬೈ : ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಏಷ್ಯಾಕಪ್ ಪಂದ್ಯಾವಳಿಯ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಅಂತಿಮ ಪಂದ್ಯ ನಡೆಯುತ್ತಿರುವುದು ಇದೇ ಮೊದಲು. ಈ ಟೂರ್ನಿಯಲ್ಲಿ ಈಗಾಗಲೇ ಎರಡು ಬಾರಿ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಸೋಲಿಸಿರುವ ಟೀಂ ಇಂಡಿಯಾ ಮೂರನೇ ಮುಖಾಮುಖಿಯಲ್ಲೂ ಗೆಲುವು ಸಾಧಿಸುವ ವಿಶ್ವಾಸ ಹೊಂದಿದೆ.
ಬೇರೆ ಕಾರಣಗಳಿಗೂ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಈಗಾಗಲೇ ವಿವಾದಕ್ಕೊಳಗಾಗಿದ್ದು, ಈ ಹಿನ್ನೆಲೆಯಲ್ಲಿ ಇತ್ತಂಡಗಳು ಗೆಲುವಿಗಾಗಿ ರಣರೋಚಕ ಕಾಳಗ ನಡೆಸುವ ಉಮೇದಿನಲ್ಲಿವೆ. ಎರಡು ಸಲ ಭಾರತದ ಕೈಯಲ್ಲಿ ಸೋತು ಅವಮಾನಕ್ಕೀಡಾಗಿರುವ ಪಾಕಿಸ್ತಾನಕ್ಕೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಿದೆ. ಅಂತೆಯೇ ಮೈದಾನದಲ್ಲಿ ಅಹಂಕಾರದಿಂದ ವರ್ತಿಸುತ್ತಿರುವ ಪಾಕ್ ಕ್ರಿಕೆಟಿಗರಿಗೆ ಪಾಠ ಕಲಿಸಲಾದರೂ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲಲೇ ಬೇಕು ಎನ್ನುವುದು ಕೋಟಿಗಟ್ಟಲೆ ಭಾರತೀಯರ ಹಾರೈಕೆ. ಹೀಗೆ ಇತ್ತಂಡಗಳ ಮೇಲೆ ಗೆಲುವಿನ ಒತ್ತಡ ಇದೆ.
ಸೂರ್ಯಕುಮಾರ್ ಫಾರ್ಮ್ನದ್ದೇ ಚಿಂತೆ
ಏಷ್ಯಾಕಪ್ನಲ್ಲಿ ಟೀಂ ಇಂಡಿಯಾವನ್ನು ಯುವ ಆಟಗಾರ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ ಆಗಿ ಸರಿಯಾಗಿ ಮುನ್ನಡೆಸುತ್ತಿದ್ದಾರೆ. ಆದರೆ ಅವರ ಫಾರ್ಮ್ ಕೈಕೊಟ್ಟಿರುವುದು ಮಾತ್ರ ಚಿಂತೆಯ ವಿಷಯವಾಗಿದೆ. ಸಿಟಿಲಬ್ಬರದ ಬ್ಯಾಟಿಂಗ್ ಖ್ಯಾತಿಯ ಸೂರ್ಯಕುಮಾರ್ ಯಾದವ್ ಬ್ಯಾಟಿನಿಂದ ಏಷ್ಯಾಕಪ್ನಲ್ಲಿ ಮಾತ್ರ ನಿರೀಕ್ಷಿತ ರನ್ಗಳು ಹರಿದುಬಂದಿಲ್ಲ. ಅದರಲ್ಲೂ ಪಾಕಿಸ್ತಾನ ವಿರುದ್ಧದ ಎರಡೂ ಪಂದ್ಯಗಳಲ್ಲೂ ಅವರ ಕಾಣಿಕೆ ಅತ್ಯಲ್ಪ. ಅಭಿಷೇಕ್ ಶರ್ಮ, ತಿಲಕ್ ವರ್ಮ ಅವತಂಥ ಆಟಗಾರೇ ಭಾರತವನ್ನು ಗೆಲ್ಲಿಸುತ್ತಿದ್ದಾರೆ. ಫೈನಲ್ ಪಂದ್ಯದಲ್ಲಿ ಪಾಕಿಗಳು ಅಭಿಷೇಕ್ ಶರ್ಮ ಅವರನ್ನು ಬೇಗ ಔಟ್ ಮಾಡುವ ತಂತ್ರ ರೂಪಸಿಸಿಕೊಳ್ಳುವುದು ಖಚಿತ.
9ನೇ ಪ್ರಶಸ್ತಿಯ ಮೇಲೆ ಭಾರತದ ಕಣ್ಣು
ಟೀಂ ಇಂಡಿಯಾ ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವುದರ ಜೊತೆಗೆ ಒಂಬತ್ತನೇ ಪ್ರಶಸ್ತಿಯನ್ನು ಗೆಲ್ಲುವ ಇರಾದೆಯಲ್ಲಿದೆ. ಈ ಪಂದ್ಯಾವಳಿಯಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಭಾರತ 1984, 1988, 1990-91, 1995, 2010, 2016, 2018, ಮತ್ತು 2023 ರಲ್ಲಿ ಪ್ರಶಸ್ತಿಯನ್ನು ಗೆದ್ದಿದೆ. ಇತ್ತ ಪಾಕಿಸ್ತಾನ ಕೇವಲ ಎರಡು ಬಾರಿ (2000, 2012) ಮಾತ್ರ ಪ್ರಶಸ್ತಿಯನ್ನು ಗೆದ್ದಿದೆ.
ಏಷ್ಯಾಕಪ್ ಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಭಾರತ ಗುಂಪು ಹಂತದಲ್ಲಿ, ನಂತರ ಸೂಪರ್ 4 ಸುತ್ತಿನಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಇದೀಗ ಫೈನಲ್ನಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗಲು ಸಜ್ಜಾಗಿವೆ. ಈ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದರೆ ದಾಖಲೆಯ 9ನೇ ಬಾರಿಗೆ ಏಷ್ಯಾಕಪ್ ಟ್ರೋಫಿಯನ್ನು ಎತ್ತಿಹಿಡಿಯುವುದಲ್ಲದೆ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾವುದೇ ತಂಡ ಮಾಡಿರದ ದಾಖಲೆಯನ್ನು ನಿರ್ಮಿಸಲಿದೆ.
ಹ್ಯಾಟ್ರಿಕ್ ಗೆಲುವು ಸಿಗುತ್ತದೆಯೇ?
ಸೂರ್ಯಕುಮಾರ್ ಪಡೆಗೆ ಇತಿಹಾಸ ನಿರ್ಮಿಸುವ ಅವಕಾಶವಿದೆ. ಈ ಫೈನಲ್ನಲ್ಲಿ ಟೀಂ ಇಂಡಿಯಾ ಗೆದ್ದರೆ ಒಂದೇ ಟೂರ್ನಮೆಂಟ್ನಲ್ಲಿ ತಂಡವೊಂದು ಮೂರು ಬಾರಿ ಒಂದೇ ಎದುರಾಳಿಯನ್ನು ಸೋಲಿಸಿದ ಮೊದಲ ತಂಡ ಎಂಬ ದಾಖಲೆ ಬರೆಯಲಿದೆ. ಐದು ಅಥವಾ ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ಟೂರ್ನಿಗಳಲ್ಲಿ ಎರಡು ತಂಡಗಳು ಪರಸ್ಪರ ಮೂರು ಬಾರಿ ಮುಖಾಮುಖಿಯಾದ ಎರಡು ನಿದರ್ಶನಗಳು ಮಾತ್ರ ಇವೆ.
ಗೆಲುವು ನೀಡುತ್ತಾ 28ರ ನಂಟು?
ವಾಸ್ತವವಾಗಿ 28ನೇ ದಿನಾಂಕದಂದು ನಡೆದಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ ಯಾವಾಗಲೂ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಈ ದಿನಾಂಕದಂದು ಇದುವರೆಗೆ ಉಭಯ ತಂಡಗಳ ನಡುವೆ ಎರಡು ಟಿ20 ಪಂದ್ಯಗಳು ನಡೆದಿವೆ. ಈ ಎರಡೂ ಪಂದ್ಯಗಳನ್ನು ಭಾರತ ಗೆದ್ದುಕೊಂಡಿದೆ. ಮೊದಲ ಬಾರಿಗೆ 2012ರ ಡಿಸೆಂಬರ್ 28 ರಂದು ನಡೆದಿದ್ದ ಟಿ20 ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 11 ರನ್ಗಳಿಂದ ಸೋಲಿಸಿತ್ತು.
ತರುವಾಯ 2022ರ ಆಗಸ್ಟ್ 28 ರಂದು ನಡೆದಿದ್ದ ಏಷ್ಯಾಕಪ್ನ ಟಿ20 ಪಂದ್ಯದಲ್ಲಿ ಭಾರತ ಮತ್ತೆ 4 ವಿಕೆಟ್ಗಳಿಂದ ಜಯಗಳಿಸಿತು. ಈ ಎರಡು ಗೆಲುವುಗಳು 28ನೇ ತಾರೀಕನ್ನು ಭಾರತೀಯ ಅಭಿಮಾನಿಗಳಿಗೆ ಶುಭ ದಿನಾಂಕವನ್ನಾಗಿ ಮಾಡಿವೆ. ಈಗ ಸೆಪ್ಟೆಂಬರ್ 28, 2025ರಂದು ನಡೆಯಲಿರುವ ಫೈನಲ್ನಲ್ಲಿಯೂ ಟೀಂ ಇಂಡಿಯಾ ಗೆಲ್ಲಲಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.
























