ಸಮೀಕ್ಷೆಯಲ್ಲಿ ಭಾಗವಹಿಸಲು ಒತ್ತಾಯ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆ
ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗ ಸ್ಪಷ್ಟಪಡಿಸಿದೆ. ಜಾತಿ ಗಣತಿ ಅಥವಾ ಸಾಮಾಜಿಕ-ಆರ್ಥಿಕ ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರು ಅಥವಾ ಕುಟುಂಬಗಳ ಸ್ವಯಂ ಇಚ್ಛೆಗೆ ಬಿಡಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಆಯೋಗ ಸೆ.22ರಿಂದ ರಾಜ್ಯದ ಕುಟುಂಬಗಳ ಹಾಗೂ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಾರಂಭಿಸಲಾಗಿದ್ದು, ಅಕ್ಟೋಬರ್ 7ರ ತನಕ ನಡೆಯಲಿದೆ. ರಾಜ್ಯದ ಸಂಪೂರ್ಣ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಲು ಉದ್ದೇಶಿಸಲಾಗಿದೆ. ಆದರೆ ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರ ಅಥವಾ ಕುಟುಂಬಗಳ ಸ್ವಯಂ ಇಚ್ಛೆಗೆ ಬಿಡಲಾಗಿದೆ. ಮಾಹಿತಿ ನೀಡುವ ಬಗ್ಗೆ, ಸಮೀಕ್ಷೆಯಲ್ಲಿ ಭಾಗವಹಿಸುವ ಬಗ್ಗೆ ಆಯೋಗ ಒತ್ತಾಯ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಒತ್ತಾಯ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ನಾವು ಸಹ ಅದನ್ನೇ ಹೇಳಿದ್ದೇವೆ. ಸಮೀಕ್ಷೆಯಲ್ಲಿ ಬರೆಸಬಹುದು ಅಥವಾ ಬಿಡಬಹುದು. ನಾವು ಯಾರನ್ನೂ ಒತ್ತಾಯ ಮಾಡುವುದಿಲ್ಲ. ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶಿವರಾಜ್ ತಂಗಡಗಿ ಹೇಳಿದ್ದಾರೆ.
























