ಹತ್ತಾರು ಸಮಸ್ಯೆಗಳಿಂದ ಕಂಗೆಟ್ಟಿರುವ ಶಿಕ್ಷಕರು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ಜಾತಿ ಗಣತಿ ಇನ್ನೂ ವೇಗ ಪಡೆದುಕೊಂಡಿಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನ ಜಾತಿ ಗಣತಿ ಆಮೆಗತಿಯಲ್ಲಿ ಸಾಗುತ್ತಿದ್ದು, ಮತ್ತಷ್ಟು ಜಟಿಲಗೊಂಡಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರ ಒಳಗೆ ಸರ್ವೆ ಕಾರ್ಯ ಪೂರ್ಣಗೊಳ್ಳಬೇಕೆಂದು ಸರ್ಕಾರ ಡೆಡ್‌ಲೈನ್ ಕೊಟ್ಟಿದೆ. ಆದರೆ ಸಮೀಕ್ಷೆ ಶುರುವಾಗಿ 5 ದಿನ ಕಳೆದಿದೆ. ಕಳೆದ 4 ದಿನಗಳಲ್ಲಿ ಶೇ.10ರಷ್ಟು ಸಹ ಪೂರ್ಣಗೊಂಡಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಗಣತಿ ಆರಂಭವೇ ಆಗಿಲ್ಲ.
ರಾಜ್ಯಾದ್ಯಂತ 4 ದಿನಗಳಲ್ಲಿ ಸರ್ವೆ ವಿಳಂಬ ಆಗಿದೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆ ಮಾಡುವ ಶಿಕ್ಷಕರು ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು ದಿನದಲ್ಲಿ ರಾಜ್ಯಾದ್ಯಂತ 11.87 ಲಕ್ಷ ಮನೆಗಳ ಸಮೀಕ್ಷೆ ಮಾಡುವ ಗುರಿ ನೀಡಲಾಗಿತ್ತು. ಆದರೆ 5 ದಿನದಲ್ಲಿ ಒಟ್ಟು 4.10 ಲಕ್ಷ ಮನೆಗಳ ಸರ್ವೇ ಮಾತ್ರ ಆಗಿದೆ.
ಕೆಎಸ್‌ಸಿಬಿಸಿ ಆ್ಯಪ್ ಸರಿಯಾಗಿ ಓಪನ್ ಆಗುತ್ತಿಲ್ಲ, ಯುನಿಕ್ ಹೌಸ್‌ಹೋಲ್ಡ್ ಐಡಿ (UHID) ಏಕಾಏಕಿ ಲಾಕ್ ಆಗುವುದು, ಯುಎಚ್‌ಐಡಿ ನಂಬರ್ ಸರಿಯಾಗಿ ವಿಳಾಸ ತೋರಿಸುತ್ತಿಲ್ಲ, ಹಿರಿಯ ಶಿಕ್ಷಕರಿಗೆ ಆ್ಯಪ್ ಬಳಕೆ ಗೊತ್ತಾಗುತ್ತಿಲ್ಲ, ಸರ್ವರ್, ನೆಟ್‌ವರ್ಕ್, ಒಟಿಪಿ, ಲೋಕೇಷನ್ ಸಮಸ್ಯೆ, ಡೇಟಾ ಅಪ್‌ಲೋಡ್ ಸಮಸ್ಯೆ, 19 ಜಿಲ್ಲೆಗಳ 526 ಬ್ಲಾಕ್‌ಗಳಲ್ಲಿ ಸಿಬ್ಬಂದಿ ನಿಯೋಜನೆ ಆಗಿಲ್ಲ ಮುಂತಾದ ತಾಂತ್ರಿಕ ಕಾರಣಗಳಿಂದಾಗಿ ಜಾತಿ ಗಣತಿ ನಿಧಾನಗತಿಯಲ್ಲಿ ಸಾಗುತ್ತಿದೆ.
ಇದೇ ರೀತಿ ಸಾಗಿದರೆ ದಸರಾ ರಜೆ ಮುಗಿಯುವುದರೊಳಗೆ ಗಣತಿ ಮುಗಿಸುವ ಸರ್ಕಾರದ ಗುರಿ ತಲುವುದು ಕಷ್ಟ ಎನ್ನಲಾಗುತ್ತಿದೆ.
























