ಪಾಕಿಸ್ತಾನದ ಹಸಿ ಸುಳ್ಳುಗಳಿಗೆ ಜಾಡಿಸಿದ ಭಾರತದ ರಾಜತಾಂತ್ರಿಕ ಅಧಿಕಾರಿ
ವಿಶ್ವಸಂಸ್ಥೆ : ಪಾಕಿಸ್ತಾನ ಭಯೋತ್ಪಾದನೆಯನ್ನು ವೈಭವೀಕರಿಸುತ್ತಿದೆ, ವಿಶ್ವವೇದಿಕೆಯಲ್ಲಿ ಸುಳ್ಳುಗಳನ್ನೇ ಹರಡುತ್ತಿದೆ ಎಂದು ಭಾರತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನಕ್ಕೆ ಬಲವಾದ ತಿರುಗೇಟು ನೀಡಿದೆ.
ಭಾರತದ ರಾಜತಾಂತ್ರಿಕ ಅಧಿಕಾರಿ ಪೆಟಲ್ ಗೆಹ್ಲೋಟ್ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಪಾಕಿಸ್ತಾನ ಭಯೋತ್ಪಾದನೆಯನ್ನು ವೈಭವೀಕರಿಸುತ್ತಿದೆ. ವಿಶ್ವವೇದಿಕೆಯಲ್ಲಿ ಸುಳ್ಳುಗಳನ್ನೇ ಬಿತ್ತರಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಶೆಹಬಾಜ್ ಷರೀಫ್ ಭಾಷಣದ ನಂತರ ಪ್ರತ್ಯುತ್ತರ ನೀಡುವ ಹಕ್ಕು ಚಲಾಯಿಸುತ್ತಾ ಗೆಹ್ಲೋಟ್ ಮಾತನಾಡಿದರು.
ನಾನು ಪ್ರಧಾನಿ ಷರೀಫ್ ಅವರ ಭಾಷಣ ಕೇಳಿದೆ. ಅವರು ಮತ್ತೊಮ್ಮೆ ತಮ್ಮ ವಿದೇಶಾಂಗ ನೀತಿಯ ಭಾಗವಾದ ಭಯೋತ್ಪಾದನೆಯನ್ನು ವೈಭವೀಕರಿಸಿದರು. ಆದರೆ ಯಾವುದೇ ಸುಳ್ಳು, ನಾಟಕಗಳು ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಹತ್ಯಾಕಾಂಡಕ್ಕೆ ಕಾರಣವಾದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆ ರೆಸಿಸ್ಟೆನ್ಸ್ ಫ್ರಂಟ್ ಅನ್ನು ಪಾಕಿಸ್ತಾನ ಸಮರ್ಥಿಸಿಕೊಂಡಿದೆ ಎಂದರು.
ಒಸಾಮಾ ಬಿಲ್ ಲಾಡೆನ್‌ಗೆ ವರ್ಷಗಳಿಂದ ಆಶ್ರಯ ನೀಡಿದ್ದ ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಡುವಂತೆ ನಟಿಸಿದ ಅದೇ ಪಾಕಿಸ್ತಾನ ಇದಾಗಿದೆ. ಪಾಕ್ ದಶಕಗಳಿಂದ ಭಯೋತ್ಪಾದನಾ ಶಿಬಿರಗಳನ್ನ ನಡೆಸುತ್ತಿದೆ ಎಂಬುದನ್ನು ಖುದ್ದು ಅಲ್ಲಿನ ಸಚಿವರೇ ಒಪ್ಪಿಕೊಂಡಿದ್ದಾರೆ ಎಂದು ಪಾಕ್ ಪ್ರಧಾನಿಗೆ ಮುಖಭಂಗ ಮಾಡಿದರು.
ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಭಾರತದ ಪರಾಕ್ರಮ ನೆನಪಿಸಿದ ಪೆಟಲ್ ಗೆಹ್ಲೋಟ್, ಸಂಘರ್ಷದಲ್ಲಿ ಪಾಕಿಸ್ತಾನ ಗೆಲುವು ಎಂದು ಹೇಳಿಕೊಳ್ಳುತ್ತಿದೆ. ವಾಸ್ತವವಾಗಿ ಅದೆಲ್ಲವೂ ಭಾರತದ ದಾಳಿಯಿಂದ ಧ್ವಂಸವಾದ ಅವರ ವಾಯುನೆಲೆಗಳು ಹಾಗೂ ಸುಟ್ಟುಹೋದ ಹ್ಯಾಂಗರ್, ಹಾನಿಗೊಳಗಾದ ರನ್‌ವೇಗಳ ಚಿತ್ರಗಳಾಗಿವೆ. ಇದು ಸಾರ್ವಜನಿಕವಾಗಿಯೂ ಲಭ್ಯವಿದೆ. ಇದನ್ನು ಗೆಲುವು ಅಂತ ಹೇಳಿಕೊಳ್ಳೋದಕ್ಕೆ ನಾಚಿಕೆ ಆಗೋದಿಲ್ಲವೇ ಎಂದು ಜಾಡಿಸಿದರು.
ಭಾರತದಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಗಳಿಗೆ ಪಾಕಿಸ್ತಾನ ಕಾರಣವಾಗಿದೆ. ಜೊತೆಗೆ ಭಾರತ ತನ್ನ ಜನರನ್ನು ರಕ್ಷಿಸಿಕೊಳ್ಳುವುದಕ್ಕೆ ಪ್ರತೀಕಾರದ ಕ್ರಮ ತೆಗೆದುಕೊಳ್ಳುತ್ತದೆ ಎಂಬುದೂ ಸತ್ಯ. ಇದರ ಹೊರತಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲ ಸಮಸ್ಯೆಗಳನ್ನ ದ್ವಿಪಕ್ಷೀಯ ಮಟ್ಟದಲ್ಲೇ ಪರಿಹರಿಸಲಾಗುವುದು. ಇದರಲ್ಲಿ 3ನೇ ವ್ಯಕ್ತಿಗೆ ಯಾವುದೇ ಅವಕಾಶವಿರುವುದಿಲ್ಲ ಎಂದು ಟ್ರಂಪ್ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಇದಕ್ಕೂ ಮೊದಲು ಮಾತನಾಡಿದ್ದ ಷರೀಫ್ ಭಾರತದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಲು ವಿಶ್ವಸಂಸ್ಥೆಯ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದರು. ಭಾರತದಲ್ಲಿ ಬೆಳೆಯುತ್ತಿರುವ ಹಿಂದೂ ಮೂಲಭೂತವಾದವು ಇಡೀ ಜಗತ್ತಿಗೆ ದೊಡ್ಡ ಬೆದರಿಕೆ ಎಂದು ಹೇಳಿದ್ದರು. ಮೇ 7-10ರಿಂದ ನಡೆದ ಭಾರತ-ಪಾಕಿಸ್ತಾನ ಮಿಲಿಟರಿ ಸಂಘರ್ಷವನ್ನು ಉಲ್ಲೇಖಿಸಿ, ಶೆಹಬಾಜ್ ಷರೀಫ್ ತಮ್ಮ ಬೆನ್ನು ತಾವೇ ತಟ್ಟಿಕೊಂಡು ಅಮೆರಿಕ ಪ್ರಧಾನಿ ಟ್ರಂಪ್ಗೆ ಧನ್ಯವಾದ ತಿಳಿಸಿದರು.
ಜಗತ್ತಿನಲ್ಲಿ ಎಲ್ಲಿಯೂ ದ್ವೇಷಕ್ಕೆ ಸ್ಥಾನವಿರಬಾರದು. ಯಾರ ವಿರುದ್ಧವೂ ತಾರತಮ್ಯ ಮಾಡಬಾರದು, ಆದರೆ ಇದು ಭಾರತದಲ್ಲಿ ನಡೆಯುತ್ತಿದೆ. ಭಾರತದಲ್ಲಿ ಆಮೂಲಾಗ್ರ ಹಿಂದುತ್ವದ ಸಿದ್ಧಾಂತವು ವೇಗವಾಗಿ ಬೆಳೆಯುತ್ತಿದೆ, ಇದು ಜಗತ್ತಿಗೆ ದೊಡ್ಡ ಬೆದರಿಕೆಯನ್ನು ಒಡ್ಡುತ್ತಿದೆ ಎಂದು ಷರೀಫ್ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಭಾರತ ನಡುವೆ ಡೊನಾಲ್ಡ್ ಟ್ರಂಪ್ ಮಧ್ಯ ಪ್ರವೇಶಿಸದಿದ್ದರೆ, ಯುದ್ಧದ ಪರಿಣಾಮಗಳು ಹಾನಿಕಾರಕವಾಗುತ್ತಿದ್ದವು ಎಂದು ಅವರು ಹೇಳಿದ್ದಾರೆ.
























