ಇಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಸ್‌.ಎಲ್‌.ಭೈರಪ್ಪ ಅಂತ್ಯಕ್ರಿಯೆ

ಸರಸ್ವತಿ ವರಪುತ್ರನ ಅಗಲಿಕೆಗೆ ಕಂಬನಿ ಮಿಡಿದ ಕರುನಾಡು

ಮೈಸೂರು: ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್.ಎಲ್ ಭೈರಪ್ಪ ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿ ಇಂದು ನಡೆಯಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರಿ ಗೌರವಗಳೊಂದಿಗೆ ಸರಸ್ವತಿ ವರಪುತ್ರನ ಅಂತ್ಯಕ್ರಿಯೆ ನೆರವೇರಲಿದೆ.

ತಮ್ಮ ಬರವಣಿಗೆಯ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ 94 ವರ್ಷದ ಭೈರಪ್ಪ ಬುಧವಾರ ವಯೋಸಹಜ ಖಾಯಿಲೆಯಿಂದ ನಿಧನ ಹೊಂದಿದ್ದಾರೆ. ಇಂದು 11.30 ಗಂಟೆಗೆ ಬ್ರಾಹ್ಮಣ ಸಂಪ್ರದಾಯದಂತೆ ಎಸ್‌.ಎಲ್ ಭೈರಪ್ಪ ಅಂತ್ಯಕ್ರಿಯೆ ನೆರವೇರಲಿದೆ.





















































 
 

ಪದ್ಮಭೂಷಣ ಎಸ್‌.ಎಲ್ ಭೈರಪ್ಪನವರ ಅಗಲಿಕೆ ಇಡೀ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದ್ದು ಇವರ ಅಂತಿಮ ದರ್ಶನಕ್ಕೆ ಇವರ ಓದುಗ ಬಳಗ ಮತ್ತು ಅಭಿಮಾನಿಗಳು ಸಾಗರದಂತೆ ಹರಿದು ಬಂದಿದೆ. ನಿನ್ನೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಅಂತಿಮ ದರ್ಶನ ಬಳಿಕ ಮೈಸೂರಿಗೆ ಪಾರ್ಥಿವ ಶರೀರ ತಂದು ಮೈಸೂರಿನ ಕಲಾಮಂದಿರಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಪಾರ್ಥಿವ ಶರೀರವನ್ನು ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಶವಗಾರದಲ್ಲಿ ಇರಿಸಲಾಯಿತು. ಇಂದು ಬೆಳಗ್ಗೆ 8 ಗಂಟೆಗೆ ಆಸ್ಪತ್ರೆಯಿಂದ ನೇರವಾಗಿ ಮೈಸೂರಿನ ಕುವೆಂಪು ನಗರದ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಮನೆಯ ಬಳಿಯೂ ಕೆಲಹೊತ್ತು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ 10.30ರವರೆಗೂ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಮಾಡಿದ್ದು, ಬಳಿಕ ಕುಟುಂಬಸ್ಥರಿಂದ ಅಂತಿಮ ಪೂಜೆ ವಿಧಿವಿಧಾನ ನಡೆಯಲಿದೆ. ನಂತರ ಅಂತ್ಯಕ್ರಿಯೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಲಿದೆ.

ಹಿರಿಯ ಸಾಹಿತಿಗೆ ಜಿಲ್ಲಾಡಳಿತ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಸಿದ್ಧತೆ ಕೂಡ ಆಗಿದೆ. ಇದೇ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಸ್ನೇಹಿತರು, ಕುಟುಂಬಸ್ಥರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ.

error: Content is protected !!
Scroll to Top