ಪಿಐಎಲ್ ವಜಾ ಆಗಿರುವುದು ಗೊತ್ತಿದ್ದೂ ಎಸ್‌ಐಟಿ ರಚನೆ ಎಂದು ಆರೋಪ
ಬೆಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸುವಂತೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದವರು ಯಾರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಿ ಕ್ಷೇತ್ರದ ವರ್ಚಸ್ಸು ಕುಗ್ಗಿಸಲೇಬೇಕೆಂಬ ವ್ಯವಸ್ಥಿತ ಷಡ್ಯಂತರಕ್ಕೆ ಕಾಂಗ್ರೆಸ್ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಈ ದುಷ್ಟ ಉದ್ದೇಶದಿಂದಲೇ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಮರೆಮಾಚಿ ಸರ್ಕಾರ ಬುರುಡೆ ಗ್ಯಾಂಗ್‌ನ ದೂರು ಸ್ವೀಕರಿಸಿ ಎಸ್ಐಟಿ ರಚಿಸಿತ್ತು ಎಂಬುದು ಈಗ ಬಯಲಾಗಿದೆ ಎಂದು ಹೇಳಿದ್ದಾರೆ.
ಸರ್ವೋಚ್ಚ ನ್ಯಾಯಾಲಯ ಬುರುಡೆ ಗ್ಯಾಂಗ್ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 2025 ಮೇ 5ರಲ್ಲೇ ವಜಾಗೊಳಿಸಿತ್ತು. ಆದಾಗ್ಯೂ ಈ ಸಂಗತಿಯನ್ನು ಮರೆಮಾಚಿ ಸರ್ಕಾರ ಕಟ್ಟುಕಥೆ ಹೆಣೆದ ಆರೋಪವನ್ನು ಆಧರಿಸಿ ದೂರು ಸ್ವೀಕರಿಸಿತು, ಬಳಿಕ ಉಗ್ರ ಎಡಪಂಥೀಯ ವಿಚಾರಧಾರೆಯ ವಿತಂಡವಾದಿಗಳ ಒತ್ತಡಕ್ಕೆ ಮಣಿದಂತೆ ನಟಿಸಿ ಸರ್ಕಾರ ಎಸ್ಐಟಿ ರಚಿಸಿತು. ಇದು ಸರ್ವೋಚ್ಛ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ.
ಇದು ಸಾರ್ವಜನಿಕ ಹಿತಾಸಕ್ತಿಯಲ್ಲ, ಬದಲಿಗೆ ಪ್ರಚಾರ, ಹಣ, ಖಾಸಗಿ ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿರುವ ಅರ್ಜಿ ಎಂದು ಸುಪ್ರೀಂ ಕೋರ್ಟ್ ವಜಾಗೊಳಿಸಿ ಷಡ್ಯಂತ್ರ ರೂಪಿಸಲು ಹೊರಟವರಿಗೆ ಮಂಗಳಾರತಿ ಎತ್ತಿದೆ. ಈ ಕೂಡಲೇ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಬೇಷರತ್ತಾಗಿ ಸರ್ವೋಚ್ಚ ನ್ಯಾಯಾಲಯದ ಕ್ಷಮೆಕೋರಲಿ. ಇದರ ಜತೆಗೆ ಧರ್ಮಸ್ಥಳದ ಷಡ್ಯಂತ್ರದಲ್ಲಿ ನಾವೂ ಭಾಗಿದಾರರು ಎಂಬ ಸತ್ಯವನ್ನು ಒಪ್ಪಿಕೊಂಡು ನಾಡಿನ ಜನತೆಯ ಕ್ಷಮೆ ಯಾಚಿಸಲಿ ಎಂದು ಆಗ್ರಹಿಸಿದ್ದಾರೆ.
ಈ ಹಿಂದಿನಿಂದಲೂ ನಾವು ಷಡ್ಯಂತ್ರ ಆಗಿದೆ ಎಂದು ಆರೋಪಿಸುತ್ತಲೇ ಇದ್ದೇವೆ, ಈ ಮಾತನ್ನು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವ್ಯವಸ್ಥಿತ ಹುನ್ನಾರದ ಹಿನ್ನೆಲೆಯಲ್ಲಿಯೇ ನಾವು ಧರ್ಮಸ್ಥಳದ ಕುರಿತು NIA ತನಿಖೆಗೆ ಒತ್ತಾಯಿಸುತ್ತಲೇ ಇದ್ದೇವೆ. ಈ ಷಡ್ಯಂತರ ರೂಪಿಸಿದವರಿಗೆ ಶಿಕ್ಷೆಯಾಗುವವರೆಗೂ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಹೇಳಿದ್ದಾರೆ.
























