ಪುತ್ತೂರು: ಪೌರ ಕಾರ್ಮಿಕರ ಮಹತ್ವ ಬಹಳಷ್ಟು ಜನರಿಗೆ ಗೊತ್ತಿಲ್ಲ. ಪರಿಸರ ಸ್ವಚ್ಛತೆ ಇದ್ದರೆ ಅಲ್ಲಿ ಓಡಾಡುವ ಜನರ ಮನಸ್ಸು ಸ್ವಚ್ಛ ಆಗುತ್ತದೆ. ಸ್ವಚ್ಛತಾ ಕೆಲಸ ಮಾಡುವವರನ್ನು ಕೀಳು ಮನೋಭಾವನೆಯಲ್ಲಿ ನೋಡದೆ ಗೌರವದಿಂದ ಕಾಣಬೇಕು. ಸರಕಾರವೂ ಪೌರ ಕಾರ್ಮಿಕರನ್ನು ಗುರುತಿಸುವುದರೊಂದಿಗೆ ಧೈರ್ಯ, ಸ್ಥೈರ್ಯ ತುಂಬುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ನಗರದ ಪುರಭವನದಲ್ಲಿ ಮಂಗಳವಾರ ನಗರಸಭೆ ವತಿಯಿಂದ ಆಯೋಜಿಸಿದ ಪೌರ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತ್ಯಾಜ್ಯ ವಿಲೇವಾರಿ ಎಂಬುದು ಸವಾಲಿನ ಕೆಲಸ. ಸ್ವಚ್ಛತಾ ಕೆಲಸ ಮಾಡುವವರು ಇದ್ದಾರೆ ಎಂದು ಪರಿಸರದ ಬಗ್ಗೆ ನಿರ್ಲಕ್ಷö್ಯ ತೋರುವುದು ತಪ್ಪು. ಕಸ ಬಿಸಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಪರಿಸರ ಹಾಳುಗೆಡಹುವ ವರ್ತನೆ ಮಾಹಿತಿ ಕೊರತೆಯಿಂದ ಅಲ್ಲ. ಪರಿಸರ ಸ್ವಚ್ಛತೆ, ರಕ್ಷಣೆಗೆ ಸಂಬಂಧಿಸಿದಂತೆ ಜನರ ಮನಸ್ಥಿತಿ ಬದಲಾಗಬೇಕು ಎಂದು ಶಾಸಕರು ಅಭಿಪ್ರಾಯಿಸಿದರು.
ಸ್ವಚ್ಛತೆಯ ಭಾಗವಾಗಿ ಪುತ್ತೂರಿಗೆ ಸಮರ್ಪಕ ಡ್ರೈನೇಜ್ ವ್ಯವಸ್ಥೆ ಬೇಕು. ಅದಕ್ಕೆ ಮಹತ್ವ ನೀಡುವ ಅನಿವಾರ್ಯತೆಯಿಂದ ರೂ. ೨೪ ಕೋಟಿ ನಗರಸಭೆಯಿಂದ ಬಂದಿದೆ. ಆದರೆ ಡ್ರೆöÊನೇಜ್ ಲೈನ್ ಮಾಡಿಲ್ಲ. ಈಗ ೧೦ ಕೋಟಿಯಲ್ಲಿ ಡಿಪಿಆರ್ ಆಗುತ್ತದೆ. ಮುಖ್ಯ ರಸ್ತೆ ಬದಿಯಲ್ಲಿ ವ್ಯವಸ್ಥಿತ ಡ್ರೆöÊನೇಜ್ ವ್ಯವಸ್ಥೆ ಮಾಡುತ್ತೇವೆ. ಹಾಲಿ ಸ್ವಚ್ಛತೆಯಲ್ಲಿ ರಾಜ್ಯಕ್ಕೆ ೨ ನೇ ಸ್ಥಾನ ಪಡೆದಿರುವ ಪುತ್ತೂರು ಮುಂದಿನ ವರ್ಷ ನಂ. ೧ ಸ್ಥಾನ ಪಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದ ಶಾಸಕರು, ಪುತ್ತೂರು ನಗರಸಭೆಯ ೩೦ ಮಂದಿ ಪೌರ ಕಾರ್ಮಿಕರನ್ನು ಖಾಯಮಾತಿ ಮಾಡಲಾಗಿದೆ. ಉಳಿದವರನ್ನು ಶೀಘ್ರ ಖಾಯಂಗೊಳಿಸಲಾಗುತ್ತದೆ ಎಂದರು.
ವೀಡಿಯೋ ಪ್ರದರ್ಶನ
ನಗರಸಭಾ ಲೆಕ್ಕಾಧೀಕ್ಷಕ ರಾಮಚಂದ್ರ ಸಾಗರ್ ಅವರು ರಚಿಸಿದ ಪೌರ ಕಾರ್ಮಿಕರ ಕಾರ್ಯಬದ್ಧತೆ, ಮಹತ್ವವನ್ನು ತಿಳಿಸುವ ಎಐ ವೀಡಿಯೋ ಸಹಿತ ಹಾಡನ್ನು ಪ್ರದರ್ಶಿಸಲಾಯಿತು. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸತೀಶ್ ಭಟ್ ಉಪನ್ಯಾಸ ನೀಡಿದರು.
ಸನ್ಮಾನ
ಈ ಸಂದರ್ಭದಲ್ಲಿ ಸುಮಾರು ೬೦ ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಪೌರ ಕಾರ್ಮಿಕರ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಣಿ ಪ್ರಾರ್ಥಿಸಿದರು. ನಗರಸಭಾ ಪೌರಾಯುಕ್ತೆ ವಿದ್ಯಾ ಎಸ್. ಕಾಳೆ ಸ್ವಾಗತಿಸಿ, ಉಪಾಧ್ಯಕ್ಷ ಬಾಲಚಂದ್ರ ಕೆ. ವಂದಿಸಿದರು. ದೈ.ಶಿ. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರ್ವಹಿಸಿದರು. ಅನಂತರ ಪೌರ ಕಾರ್ಮಿಕರು ಹಾಗೂ ಅವರ ಮನೆಯವರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.
























