ಬದ್ಧ ಎದುರಾಳಿಗಳ ಇನ್ನೊಂದು ಮುಖಾಮುಖಿಯತ್ತ ಎಲ್ಲರ ಚಿತ್ತ
ದುಬೈ: ಮುಂದಿನ ಭಾನುವಾರ ಇನ್ನೊಮ್ಮೆ ಭಾರತ ಮತ್ತು ಪಾಕಿಸ್ತಾನದ ನಡುವೆ ಇನ್ನೊಂದು ಹೈವೋಲ್ಟೇಜ್ ಪಂದ್ಯ ನಡೆಯಲು ವೇದಿಕೆ ಸಿದ್ಧವಾಗಿದೆ. ನಿರ್ಣಾಯಕ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ ಪಾಕಿಸ್ತಾನ 11 ರನ್ಗಳ ಸೋಲುಣಿಸಿ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ. ಹೀಗಾಗಿ ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್ ನಡೆಯುವುದು ಪಕ್ಕಾ ಆಗಿದೆ. ಇದೇ ಮೊದಲ ಬಾರಿಗೆ ಏಷ್ಯಾ ಕಪ್ ಟೂರ್ನಿಯ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ಸೆಣಸಾಟ ನಡೆಸಲಿವೆ ಎನ್ನುವುದು ಇನ್ನೊಂದು ವಿಶೇಷತೆ.
1984ರಲ್ಲಿ ಏಷ್ಯಾ ಕಪ್ ಪ್ರಾರಂಭವಾದ ಬಳಿಕ ಈವರೆಗೆ ಒಟ್ಟು 16 ಬಾರಿ ಉಭಯ ತಂಡಗಳ ನಡುವೆ ಪಂದ್ಯಾವಳಿ ಜರುಗಿದೆ. ಆದರೆ ಈವರೆಗೂ ಕ್ರಿಕೆಟ್ನ ಬದ್ಧ ಎದುರಾಳಿಗಳಾದ ಪಾಕಿಸ್ತಾನ ಮತ್ತು ಭಾರತ ಪರಸ್ಪರರ ವಿರುದ್ಧ ಫೈನಲ್ ಪಂದ್ಯ ಆಡಿರಲಿಲ್ಲ. ಇದೀಗ ಭಾನುವಾರದಂದು ನಡೆಯಲಿರುವ ಪಂದ್ಯ ಅಕ್ಷರಶಃ ಹೈವೋಲ್ಟೇಜ್ ಪಂದ್ಯವಾಗಲಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೂಪರ್ ಫೋರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಲು ಶಕ್ತವಾಯಿತು. ಪಾಕಿಸ್ತಾನದ ಬ್ಯಾಟರ್ಗಳು ಕೈಕೊಟ್ಟರೂ ಬೌಲರ್ಗಳ ಸಾಹಸದಿಂದಾಗಿ ಪಂದ್ಯ ರೋಮಾಂಚಕ ಅಂತ್ಯ ಕಾಣುವಂತಾಯಿತು. ಬಾಂಗ್ಲಾದೇಶ ತಂಡದ ಬ್ಯಾಟರ್ ಗಳನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಾಹಿನ್ ಶಾ ಅಫ್ರಿದಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಈ ಏಷ್ಯಾ ಕಪ್ ಟೂರ್ನಿಯಲ್ಲಿ ಎರಡು ಸಲ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದು, ಎರಡೂ ಪಂದ್ಯವನ್ನು ಭಾರತ ಗೆದ್ದುಕೊಂಡು ಬೀಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರ ಪಾಕಿಸ್ತಾನ ವಿರುದ್ಧ ನಡೆದ ಸೇನಾ ಕಾರ್ಯಾಚರಣೆ ಆಪರೇಷನ್ ಸಿಂದೂರ ಹಿನ್ನೆಲೆಯಲ್ಲಿ ನೆರೆ ರಾಷ್ಟ್ರದ ಜೊತೆಗಿನ ಸಂಬಂಧವನ್ನು ಭಾರತ ಸಂಪೂರ್ಣ ಕಡಿದುಕೊಂಡಿರುವುದರಿಂದ ಎರಡೂ ಪಂದ್ಯಗಳು ಬಿಗುವಿನಿಂದ ಕೂಡಿದ್ದವು. ಹ್ಯಾಂಡ್ ಶೇಕ್ ನೀಡದ ಭಾರತದ ಆಟಗಾರರ ನಿಲುವು ಪಾಕಿಸ್ತಾನಕ್ಕೆ ಅವಮಾನ ಮಾಡಿದ್ದರೆ ಪಾಕಿಸ್ತಾನ ಆಟಗಾರರು ಮೈದಾನದಲ್ಲೇ ತಮ್ಮ ಭಯೋತ್ಪಾದಕ ಮನಸ್ಥಿತಿಯನ್ನು ತೋರಿಸಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಊಭಯ ತಂಡಗಳು ಐಸಿಸಿಗೆ ದೂರು ನೀಡಿದ್ದು, ಈ ಎಲ್ಲ ಹಿನ್ನೆಲೆಯಲ್ಲಿ ಭಾನುವಾರದ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ.
























