ಪುತ್ತೂರು: ಕಡಲ ತೀರದ ಭಾರ್ಗವ ಡಾ. ಶಿವರಾಮಕಾರಂತ ಅವರ ೧೨೪ನೇ ಜನ್ಮದಿನೋತ್ಸವ ಹಾಗೂ ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅ.೧೦ ರಂದು ಕಾರಂತರ ಕರ್ಮಭೂಮಿ ಪುತ್ತೂರಿನ ಪರ್ಲಡ್ಕದ ಬಾಲವನದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ೨೦೨೪ ಹಾಗೂ ೨೫ ಎರಡೂ ವರ್ಷಗಳ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಮಂಗಳವಾರ ಉಪವಿಭಾಗಾಧಿಕಾರಿ ಕಛೇರಿ ಸಭಾಂಗಣದಲ್ಲಿ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಬಾಲವನ ಅಭಿವೃದ್ಧಿ ಹಿನ್ನಲೆಯಲ್ಲಿ ಸ್ಥಳೀಯ ಮಟ್ಟದ ಸಮಿತಿಯೊಂದರ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ೧೧ ಮಂದಿ ಸಮಿತಿ ನೇಮಕ ಮಾಡುವಂತೆ ಸರಕಾರದ ಗಮನ ಸೆಳೆಯಲಾಗಿದೆ. ಶಾಸಕರ ಅಧ್ಯಕ್ಷತೆ ಹಾಗೂ ಉಪವಿಭಾಗಾಧಿಕಾರಿ ಅವರು ಪದನಿಮಿತ್ತ ಕಾರ್ಯದರ್ಶಿಯಾಗಿರುವ ಈ ಸಮಿತಿಗೆ ಬೇಕಾದ ೮ ಮಂದಿಯ ಹೆಸರನ್ನು ಈಗಾಗಲೇ ಸರಕಾರಕ್ಕೆ ಕಳುಹಿಸಲಾಗಿದೆ. ೧೫ ದಿನಗಳಲ್ಲಿ ಸಮಿತಿ ಕುರಿತು ಸರಕಾರ ಆದೇಶ ಹೊರಡಿಸಲಿದೆ. ಇದರ ಜತೆಗೆ ಸಮಿತಿಗೆ ಸದಸ್ಯರನ್ನೂ ಸೇರಿಸಿಕೊಳ್ಳಲಾಗವುದು ಎಂದು ಅವರು ತಿಳಿಸಿದರು.
ಡಾ.ಕಾರಂತ ಬಾಲವನದ ಮೂಲ ವ್ಯವಸ್ಥೆಗೆ ಧಕ್ಕೆಯಾಗದಂತೆ ಇಲ್ಲಿ ಅಭಿವೃದ್ಧಿ ಕಾರ್ಯ ನಡೆಯಬೇಕಾಗಿದೆ. ಪ್ರಕೃತಿದತ್ತವಾಗಿರುವ ಬಾಲವನದಲ್ಲಿ ದೇಶದ ಸಾಹಿತಿಗಳು, ಕಾದಂಬರಿಕಾರರು ಹಾಗೂ ಕಥೆಗಾರರು ಇಲ್ಲಿ ಬಂದು ತಮ್ಮ ಕೃತಿಗಳನ್ನು ರಚಿಸುವ ಹಾಗೆ ಬರಹಗಾರರ ತಾಣವನ್ನಾಗಿ ರೂಪಿಸಲು ಚಿಂತನೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಉಪವಿಭಾಗಾಧಿಕಾರಿ ಸ್ಟೆಲ್ಲಾ ವಗೀಸ್ ಅವರು ಮಾತನಾಡಿ, ಬಾಲವನದಲ್ಲಿ ಹಲವು ಸಮಸ್ಯೆಗಳಿವೆ. ಸ್ವಚ್ಛತಾ ವಿಚಾರವಾಗಿಯೂ ದೂರುಗಳು ಬರುತ್ತಿವೆ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಪ್ರತೀ ವರ್ಷ ರೂ.೮ ಲಕ್ಷ ಬಿಡುಗಡೆಯಾಗುತ್ತಿದೆ. ಬಾಲವನ ಪ್ರವೇಶ ಶುಲ್ಕವಾಗಿ ಕೇವಲ ರೂ.೫೦ ಸಾವಿರಕ್ಕೂ ಕಡಿಮೆ ಹಣ ಬರುತ್ತಿದೆ. ಇಲ್ಲಿ ಸಿಬಂದಿಗೆ ಪ್ರವೇಶ ಶುಲ್ಕದಿಂದಲೇ ವೇತನ ನೀಡಬೇಕಾಗಿದೆ. ಆದರೆ ಸಾಕಾಗುತ್ತಿಲ್ಲ. ಬಾಲವನ ಅಭಿವೃದ್ಧಿ ಖಾತೆಯಲ್ಲಿ ರೂ.೧ ಕೋಟಿ ಇದೆ. ಆದರೆ ಇದನ್ನು ಬಳಕೆ ಮಾಡಲು ಷರತ್ತುಗಳಿವೆ. ಮುಂದಿನ ಸಮಿತಿ ರಚನೆ ಮಾಡಿದ ಬಳಿಕ ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಜತೆಗೆ ಈ ಸಮಿತಿ ಮೂಲಕ ಬಾಲವನದಲ್ಲಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.
ಪ್ರಶಸ್ತಿ ಆಯ್ಕೆ ಸಮಿತಿ ರಚನೆ
ಪುತ್ತೂರು ಶಾಸಕರ ಅಧ್ಯಕ್ಷತೆ ಹಾಗೂ ಉಪವಿಭಾಗಾಧಿಕಾರಿ ಕಾರ್ಯದರ್ಶಿಯಾಗಿರುವ ಆಯ್ಕೆ ಸಮಿತಿಗೆ ಸಾಹಿತಿಗಳಾದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಝೇವಿಯರ್ ಡಿಸೋಜ, ಡಾ. ತಾಳ್ತಜೆ ವಸಂತಕುಮಾರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಉಮೇಶ್ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು. ೨೦೨೪ ಹಾಗೂ ೨೦೨೫ನೇ ಸಾಲಿನ ಡಾ.ಕಾರಂತ ಬಾಲವನ ಪ್ರಶಸ್ತಿಗೆ ಈ ಸಮಿತಿ ಪ್ರತ್ಯೇಕ ಕ್ಷೇತ್ರಗಳ ಇಬ್ಬರು ಸಾಧಕರನ್ನು ಆಯ್ಕೆ ಮಾಡಲಿದೆ. ಮುಂದಿನ ಒಂದು ವಾರ ಇದಕ್ಕಾಗಿ ಮೀಸಲಾಗಿಡಲಾಗಿದೆ. ಡಾ.ಕಾರಂತರ ಜನ್ಮದಿನೋತ್ಸವಕ್ಕೆ ದಿಕ್ಸೂಚಿ ಭಾಷಣಕ್ಕಾಗಿ ಆಯ್ಕೆ ಮಾಡುವಾಗ ಕಾರಂತರ ಒಡನಾಡಿಗಳು ಅಥವಾ ಕಾರಂತರ ಕ್ಷೇತ್ರಗಳಲ್ಲಿ ಆಸಕ್ತರಾದ ವ್ಯಕ್ತಿಗಳನ್ನು ಆಯ್ಕೆ ಮಾಡುವಂತೆ ಶಾಸಕರು ಸೂಚಿಸಿದರು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಡಿವೈಎಸ್ಪಿ ಅರುಣ್ ನಾಗೇಗೌಡ, ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ, ಪ್ರಮುಖರಾದ ಬಿ. ಪುರಂದರ ಭಟ್, ಐ.ಕೆ. ಬೊಳುವಾರು, ಶ್ರೀಧರ್ ಎಚ್. ಜಿ., ರಾಘವೇಂದ್ರ ಹಲ್ಕೆರೆ, ವಿದುಷಿ ನಯನ ವಿ. ರೈ, ಭಾಸ್ಕರ ಬಾರ್ಯ, ಡಾ. ಎಚ್. ಮಾಧವ ಭಟ್, ಚಂದ್ರಶೇಖರ ಆಳ್ವ, ಅಕ್ರಮ ಸಕ್ರಮ ಸಮಿತಿಯ ಸದಸ್ಯ ರಾಮಣ್ಣ ಪಿಲಿಂಜ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಲೋಕೋಪಯೋಗಿ ಇಲಾಖಾಧಿಕಾರಿ ರಾಜೇಶ್ ರೈ, ಇಂಜಿನಿಯರ್ ಪ್ರಮೋದ್‌ಕುಮಾರ್, ಎ. ರಾಮಚಂದ್ರ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ವಿದ್ಯಾ ಗೌರಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕರಾದ ಶಿಕ್ಷಕ ಜಗನ್ನಾಥ ಅರಿಯಡ್ಕ ಸ್ವಾಗತಿಸಿ, ರಮೇಶ್ ಉಳಯ ಕಾರ್ಯಕ್ರಮ ನಿರ್ವಹಿಸಿದರು.
























