ಖಾಸಗಿ ಜಮೀನಿನಲ್ಲಿ ಪಿಡಬ್ಲ್ಯೂಡಿ ನಿರ್ಮಿಸಿದ ರಸ್ತೆ ಅಗೆದು ಹಾಕಿದ ಮಾಲೀಕರು

ಜಮೀನು ಮಾಲೀಕರ ಒಪ್ಪಿಗೆಯಿಲ್ಲದೆ ನಿರ್ಮಿಸಿದ್ದ ರಸ್ತೆ; ಸಾರ್ವಜನಿಕರ ಓಡಾಟಕ್ಕೆ ತೊಂದರೆ

ಮಂಗಳೂರು: ಖಾಸಗಿ ಜಮೀನಿನಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸಿರುವ ಪಿಡಬ್ಲ್ಯೂಡಿ ಅಧಿಕಾರಿಗಳ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದ್ದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ ಎಂದು ಆರೋಪಿಸಿ ಜಮೀನು ಮಾಲಕರು ರಸ್ತೆ ಅಗೆದಿರುವ ಘಟನೆ ಬುಧವಾರ ಬಜಪೆ ಸಮೀಪ ನಿಡ್ಡೋಡಿಯ ಮಂಜನಕಟ್ಟೆ ಎಂಬಲ್ಲಿ ನಡೆದಿದೆ.

ನಿಡ್ಡೋಡಿ ಮಂಜನಕಟ್ಟೆ ನಿವಾಸಿ ಸಿಸಿಲಿಯಾ ಅವರು ವಿದೇಶದಲ್ಲಿದ್ದ ಸಂದರ್ಭ ಅವರ ಖಾಸಗಿ ಜಮೀನಿನಲ್ಲಿ ಯಾವುದೇ ಮಾಹಿತಿ ನೀಡದೆ ಪಿಡಬ್ಲ್ಯೂಡಿ ಇಲಾಖೆ 2008ರಲ್ಲಿ ರಸ್ತೆ ನಿರ್ಮಾಣ ಮಾಡಿದೆ.





















































 
 

ಪಿಡಬ್ಲ್ಯೂಡಿ ಇಲಾಖೆಯ ಅಕ್ರಮ ಪ್ರವೇಶದ ಕುರಿತು ಸಿಸಿಲಿಯಾ ನ್ಯಾಯಾಲಯದ ಮೊರೆ ಹೋಗಿದ್ದರು. ವಾದ-ವಿವಾದ ಆಲಿಸಿದ್ದ ನ್ಯಾಯಾಲಯ ಸಿಸಿಲಿಯಾ ಅವರ ನಿವೇಶನಕ್ಕೆ ಸಮವಾಗಿರುವ ನಿವೇಶನ ನೀಡಬೇಕು ಅಥವಾ ರಸ್ತೆ ತೆರವು ಮಾಡಿ ನಿವೇಶನ ನೀಡಬೇಕೆಂದು 2017ರಲ್ಲೇ ತೀರ್ಪು ನೀಡಿತ್ತು.

ಆದರೆ ನ್ಯಾಯಾಲಯದ ತೀರ್ಪು ಉಲ್ಲಂಘಿಸುತ್ತಲೇ ಬಂದಿದ್ದ ಪಿಡಬ್ಲ್ಯೂಡಿ ಇಲಾಖೆ, ತಹಶೀಲ್ದಾರ್ ಮುಂತಾದವರಿದ್ದ ಪ್ರಕರಣದ ಎದುರು ಕಕ್ಷಿಗಳು ಈ ವರೆಗೂ ಯಾವುದೇ ಬದಲಿ ವ್ಯವಸ್ಥೆಯಾಗಲಿ ಅಥವಾ ನಿರ್ಮಾಣಗೊಂಡಿರುವ ರಸ್ತೆಯನ್ನು ತೆರವು ಮಾಡಿ ಸಿಸಿಲಿಯಾ ಅವರಿಗೆ ನೀಡುವ ಗೋಜಿಗೆ ಹೋಗಿಲ್ಲ. ಹಾಗಾಗಿ ಸಿಸಿಲಿಯಾ ಅವರು ನ್ಯಾಯಾಲಯದ ಆದೇಶದಂತೆ ನ್ಯಾಯಾಲಯದ ಸಿಬ್ಬಂದಿಯ ಸಮ್ಮುಖದಲ್ಲೇ ತಮ್ಮ ನಿವೇಶನದ ಗಡಿ ಗುರುತಿಸಿ ರಸ್ತೆ ಅಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ಘಟನೆಯಿಂದ ಕಿನ್ನಿಗೋಳಿ, ಮೂಡುಬಿದಿರೆ, ಕೈಕಂಬ, ಮಂಗಳೂರು ಮುಂತಾದೆಡೆ ಸಂಚರಿಸುವ ವಾಹನಗಳು, ಬಸ್‌ಗಳು, ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸ್ಥಳದಲ್ಲಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.

error: Content is protected !!
Scroll to Top