ಜ್ಞಾನಪೀಠಕ್ಕೆ ಅರ್ಹವಾದ ಸಾಹಿತ್ಯದ ಶಿಖರ ಎಸ್.ಎಲ್ ಭೈರಪ್ಪ

ಭಾರತದ ಬಹುಶ್ರೇಷ್ಠರಾದ ಕಾದಂಬರಿಕಾರ

ಸರ್ವಶ್ರೇಷ್ಠವಾದ 24 ಕಾದಂಬರಿಗಳಿಂದ ಕನ್ನಡದ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಎಸ್.ಎಲ್ ಭೈರಪ್ಪರ ನಿರ್ಗಮನ ಕನ್ನಡ ಸಾರಸ್ವತ ಲೋಕದಲ್ಲಿ ಭಾರಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಅವರ ಉಪಮೆಯಾದ ಇನ್ನೊಬ್ಬ ಕಾದಂಬರಿಕಾರ (ಕಾರಂತರನ್ನು ಹೊರತುಪಡಿಸಿ) ಕನ್ನಡ ಸಾಹಿತ್ಯದಲ್ಲಿ ನಮಗೆ ದೊರೆಯಲಾರರು.

ಭೀಮಕಾಯದಿಂದ ಆರಂಭವಾದ ಸಾಹಿತ್ಯ ಯಾನ





















































 
 

ಎಸ್.ಎಲ್ ಭೈರಪ್ಪ ಅವರನ್ನು ಸಾರ್ವಕಾಲಿಕ ಶ್ರೇಷ್ಠರಾದ ಕಾದಂಬರಿಕಾರ ಎಂದು ನಾವು ಕರೆಯಲು ನಮ್ಮ ಮುಂದೆ ನೂರಾರು ಕಾರಣಗಳಿವೆ. ಅವರು ದಶಕಗಳ ಕಾಲ ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೋಧನೆ ಮಾಡಿದ್ದು ತತ್ವಶಾಸ್ತ್ರವನ್ನು. ಸಂಶೋಧನೆ ಮಾಡಿದ್ದು ಭಾರತದ ನಿಜವಾದ ಇತಿಹಾಸ, ಪುರಾಣ, ಭಾರತೀಯ ಸಂಸ್ಕೃತಿ, ಸಾಹಿತ್ಯ, ಕಲೆ, ವಿಜ್ಞಾನ ಮತ್ತು ಸಂಗೀತಗಳನ್ನು. ಅವೆಲ್ಲವೂ ಅವರ ಕಾದಂಬರಿಗಳಲ್ಲಿ ಹದವಾಗಿ ಬೆರೆತು ಬಿಡುತ್ತಿದ್ದವು. ಅವರ ಕಥನ ಕಲೆ, ಪಾತ್ರ ಚಿತ್ರಣ, ನಿರೂಪಣೆ, ಭಾಷಾ ಪ್ರಯೋಗಗಳು, ಸನ್ನಿವೇಶಗಳನ್ನು ಕಟ್ಟುವ ರೀತಿ, ಕಲ್ಪನೆ ಇವೆಲ್ಲವೂ ಅದ್ಭುತವೇ ಹೌದು.

ವಜ್ರದ ಹರಳುಗಳ ಹಾಗೆ ಹೊಳೆಯುವ 24 ಕಾದಂಬರಿ

ಭೀಮಕಾಯ(1952)ವು ಅವರ ಮೊದಲನೆ ಕಾದಂಬರಿ. ಅಲ್ಲಿಂದ ಆರಂಭ ಮಾಡಿ ಮುಂದಿನ 50 ವರ್ಷಗಳ ಕಾಲ ಅವರು ಎರಡು – ಮೂರು ವರ್ಷಗಳ ಅಂತರದಲ್ಲಿ ಹೊಸ ಕಾದಂಬರಿಗಳನ್ನು ಬರೆಯುತ್ತಾ ಹೋದರು. ದಾಟು, ಭಿತ್ತಿ, ತಂತು, ಅಂಚು, ಉತ್ತರಕಾಂಡ, ಸಾರ್ಥ, ನಿರಾಕರಣ, ಸಾಕ್ಷಿ, ಕವಲು, ಪರ್ವ, ಧರ್ಮಶ್ರೀ, ದೂರ ಸರಿದರು, ವಂಶವೃಕ್ಷ, ಆವರಣ, ಗ್ರಹಣ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ನೆಲೆ, ಅನ್ವೇಷಣ, ಮತದಾನ, ಗೃಹಭಂಗ, ಯಾನ ಇವೆಲ್ಲವೂ ಎಸ್.ಎಲ್ ಭೈರಪ್ಪನವರ ಅತ್ಯಂತ ಜನಪ್ರಿಯ ಕಾದಂಬರಿಗಳು. ಇವುಗಳಲ್ಲಿ ಗುಣಮಟ್ಟದಲ್ಲಿ ಯಾವುದೂ ಕಡಿಮೆ ಇಲ್ಲ.

ಭೈರಪ್ಪ ಅವರ ಕಾದಂಬರಿಗಳ ಜನಪ್ರಿಯತೆ

ಅವರ ಒಂದೊಂದು ಕಾದಂಬರಿ ಕೂಡ ಕನ್ನಡದಲ್ಲಿ ಅತಿಹೆಚ್ಚು ಮರುಮುದ್ರಣಗಳನ್ನು ಕಂಡಿವೆ. ಹಿಂದಿ ಸಹಿತವಾಗಿ ಭಾರತದ ಹೆಚ್ಚಿನ ಭಾಷೆಗಳಿಗೆ ಅನುವಾದವಾಗಿವೆ. ಇಷ್ಟು ಜನಪ್ರಿಯವಾದ ಕಾದಂಬರಿಕಾರರು ಭಾರತದಲ್ಲಿ ನಮಗೆ ಹೆಚ್ಚು ಮಂದಿ ದೊರೆಯುವುದಿಲ್ಲ. ಯಾನ, ಆವರಣಗಳು ಪ್ರಕಟವಾಗುವ ಮೊದಲೇ ಅವುಗಳ ಸಾವಿರಾರು ಪ್ರತಿಗಳು ಬುಕ್ ಆಗಿ ದಾಖಲೆ ಬರೆದಿದ್ದವು.

ಧರ್ಮಶ್ರೀ ಮಾರಾಟದ ದಾಖಲೆ ಯಾರಿಗೂ ಇದುವರೆಗೆ ಮುರಿಯಲು ಸಾಧ್ಯವಾಗಿಲ್ಲ. ಅವರ ಎಲ್ಲ 24 ಕಾದಂಬರಿ ನಾನು ಓದಿದ್ದೇನೆ ಮತ್ತು ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾದ ಕಥಾ ನಿರೂಪಣೆಗಳು. ಭಿತ್ತಿ ಅವರ ಬದುಕಿನ ಕಥೆ. ಅದು ಅವರ ನೇರ ನಡೆ ನುಡಿಯ ಅನಾವರಣವೇ ಹೌದು. ಧರ್ಮಶ್ರೀ ಕಾದಂಬರಿಯು ನನ್ನ ಯೋಚನೆಯ ವಿಧಾನವನ್ನೇ ಬದಲು ಮಾಡಿದ ಕೃತಿ. ಅವರ ವಂಶವೃಕ್ಷ, ನಾಯಿ ನೆರಳು, ಮತದಾನ, ತಬ್ಬಲಿಯು ನೀನಾದೆ ಮಗನೆ ಸಿನೆಮಾಗಳಾಗಿ ಕೂಡ ಜನಪ್ರಿಯವಾಗಿವೆ. ಗೃಹಭಂಗ ಟಿವಿಯಲ್ಲಿ ದೀರ್ಘ ಕಾಲ ಧಾರಾವಾಹಿಯಾಗಿ ಜನಪ್ರಿಯತೆ ಪಡೆಯಿತು. ಅವರ ಅನೇಕ ಕಾದಂಬರಿಗಳ ಮರಾಠಿ ಅನುವಾದಗಳು ಮಹಾರಾಷ್ಟ್ರದಲ್ಲಿ ಬೆಸ್ಟ್ ಸೆಲ್ಲರ್ ಕೃತಿ ಆಗಿದ್ದವು.

ಪರ್ವ – ವ್ಯಾಸ ಭಾರತಕ್ಕೊಂದು ನೂತನ ಆಯಾಮ

ಪರ್ವ ಅವರ ಸಾರ್ವಕಾಲಿಕ ಶ್ರೇಷ್ಠ ಕಾದಂಬರಿ. ವ್ಯಾಸರ ಮಹಾಭಾರತವನ್ನು ಕುಂತಿಯ ಮೂಲಕ ಹೇಳುವ ಮೇರು ಕೃತಿ ಇದು. ಭಾರತೀಯ ಪುರಾಣಗಳನ್ನು ಆ ಕೋನದಲ್ಲಿ ನೋಡಲು ಸಾಧ್ಯ ಅಂದರೆ ಅದು ಭೈರಪ್ಪ ಅವರಿಗೆ ಮಾತ್ರ ಸಾಧ್ಯ! ವ್ಯಾಸ ಭಾರತವನ್ನು ಗೊಡ್ಡು ಸಂಪ್ರದಾಯವಾಗಿ ನೋಡದೆ ಅದಕ್ಕೆ ವೈಜ್ಞಾನಿಕ ಸ್ಪರ್ಶವನ್ನು ನೀಡಿದ ಶ್ರೇಷ್ಠ ಕಾದಂಬರಿ ಅದು. ಪರ್ವವನ್ನು ರಂಗಾಯಣ ಮೈಸೂರಿನ ರೆಪರ್ಟರಿ ತಂಡದವರು ಒಂದು ದರ್ಶನೀಯ ನಾಟಕವಾಗಿ ವೇದಿಕೆಗೆ ತಂದಾಗ ಅದು ಬರೋಬ್ಬರಿ ಎಂಟು ಗಂಟೆಗಳ ರಂಗ ಪ್ರಯೋಗವಾಗಿತ್ತು. ಅದನ್ನು ಮೈಸೂರಿನ ಶ್ರೇಷ್ಠ ರಂಗಾಯಣದಲ್ಲಿ ಬೆಚ್ಚಗೆ ಕೂತು ನೋಡಿದ ಕ್ಷಣ ನಾನು ಮರೆಯಲು ಸಾಧ್ಯವೇ ಇಲ್ಲ. ಏಕೆಂದರೆ ನಮ್ಮ ಎದುರಿನ ಸಾಲಿನಲ್ಲಿ ಸ್ವತಃ ಭೈರಪ್ಪ ಕೂತು ಕಣ್ಣು ರೆಪ್ಪೆ ಮಡಚದೆ ಇಡೀ ನಾಟಕವನ್ನು ನೋಡಿದ್ದರು! ಪರ್ವ ದೇಶದಾದ್ಯಂತ ನೂರಾರು ಪ್ರಯೋಗ ಮುಂದೆ ಕಂಡಿತು.
ಭೈರಪ್ಪ ಇದ್ದದ್ದೇ ಹಾಗೆ! ಅವರೇಕೆ ಬದಲಾಗುತ್ತಾರೆ?

ಪರ್ವ ಕಾದಂಬರಿಯನ್ನು ಬರೆಯುವುದಕ್ಕಾಗಿ ಅವರು ಮಾಡಿಕೊಂಡ ಸಿದ್ಧತೆ, ದೀರ್ಘ ಪ್ರಯಾಣ, ಅಧ್ಯಯನಗಳ ಬಗ್ಗೆಯೇ ಭೈರಪ್ಪ ಒಂದು ಪುಸ್ತಕವನ್ನು ಬರೆದಿದ್ದು ಅದೂ ರೋಮಾಂಚಕ ಅನುಭವ ನೀಡುತ್ತದೆ. ಅವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ನೂರಾರು ಮುಖಪುಟದ ಲೇಖನಗಳು ನನಗೆ ಅವರ ಅಧ್ಯಯನದ ಬೆರಗು. ಗಿರೀಶ್ ಕಾರ್ನಾಡ್ ಮತ್ತು ಯು.ಆರ್ ಅನಂತಮೂರ್ತಿ ಅಂತವರ ಜೊತೆ ಅವರು ಬಹಿರಂಗವಾಗಿ ಲೇಖನಗಳ ಮೂಲಕ ವಾಗ್ವಾದಕ್ಕೆ ಇಳಿದಿದ್ದರು. ಆದರೂ ಅದು ವೈಯಕ್ತಿಕ ಮಟ್ಟಕ್ಕೆ ಹೋಗದೆ ಕೇವಲ ನಿಲುವುಗಳ ತಾಕಲಾಟವಾಗಿ ಜ್ಞಾನದ ನವನೀತ ಸಾಹಿತ್ಯದ ಲೋಕಕ್ಕೆ ನೀಡಿದ್ದು ಕೂಡ ಬೆರಗೇ! ಭೈರಪ್ಪನವರ ಆಳವಾದ ಅಧ್ಯಯನದ ಮುಂದೆ ಯಾರೂ ನಿಲ್ಲಲು ಸಾಧ್ಯ ಇರಲಿಲ್ಲ.

ಅವರ ಮಾತು, ಬರವಣಿಗೆ, ಬದುಕು ಎಲ್ಲವೂ ನೇರ, ದಿಟ್ಟ ಮತ್ತು ನಿರಂತರ. ಭಾರತದ ಇತಿಹಾಸ ಮತ್ತು ಸಂಸ್ಕೃತಿಗಳ ಬಗ್ಗೆ ಅವರ ನಿಲುವುಗಳು ಕೊನೆಯವರೆಗೂ ಬದಲಾಗಲೇ ಇಲ್ಲ. ಅವರ ಟೀಕಾಕಾರರು ಅವರನ್ನು ಬಲಪಂಥೀಯ ಲೇಖಕ ಎಂದು ಕರೆದರೂ ಭೈರಪ್ಪ ತಮ್ಮ ನಿಲುವುಗಳನ್ನು ಬದಲಾವಣೆ ಮಾಡಲೇ ಇಲ್ಲ.

ಮಗುವಿನ ಮನಸ್ಸು – ದ್ವೇಷ ಇಲ್ಲವೇ ಇಲ್ಲ

ಅವರು ವಜ್ರಕ್ಕಿಂತ ಕಠಿಣವಾಗಿ ಹೊರಗಿನಿಂದ ಕಂಡರೂ ಅವರ ಒಳಗಿದ್ದದ್ದು ಒಂದು ಪುಟ್ಟ ಮಗುವೇ. ಕೀರ್ತಿ ಶನಿ ಅವರನ್ನು ಎಂದಿಗೂ ಕಾಡಿದ್ದು ಇಲ್ಲ. ತಮ್ಮ ಪುಸ್ತಕಗಳ ಮಾರಾಟದ ಮೂಲಕ ಬಂದ ರಾಯಲ್ಟಿಯ ಬಹುದೊಡ್ಡ ಭಾಗವನ್ನು ಒಂದು ಟ್ರಸ್ಟ್ ಮಾಡಿ ಜನಸೇವೆಗೆ ವಿನಿಯೋಗ ಮಾಡಲು ನಿರ್ದೇಶನ ನೀಡಿದ್ದು ನಿಜವಾಗಿಯೂ ಗ್ರೇಟ್. ಸಾಕಷ್ಟು ಎಳೆಯರಿಗೆ ಬರೆಯಲು ಅವರು ಪ್ರೇರಣೆ ನೀಡಿದ್ದಾರೆ. ನೀವೆಲ್ಲರೂ ಮುಂದೆ ಮೆರೆಯಬೇಕು ಕಣ್ರೋ ಎಂದವರು ಹೇಳುತ್ತಿದ್ದರು. ಶ್ರೇಷ್ಠ ಪದ್ಮಶ್ರೀ, ಪದ್ಮಭೂಷಣ, ಸರಸ್ವತಿ ಸಮ್ಮಾನ, ಸಾಹಿತ್ಯ ಆಕಾಡೆಮಿ ಪ್ರಶಸ್ತಿಗಳು ಬಂದ ನಂತರವೂ ಅವರ ಕಾಲುಗಳು ನೆಲದ ಮೇಲೆಯೇ ಇದ್ದವು. ಅವರ ಬರವಣಿಗೆಗೆ ಜ್ಞಾನಪೀಠವು ದೊರೆತಿಲ್ಲ ಅನ್ನುವುದು ನಮ್ಮ ಜಿಪುಣತನ ಹೊರತು ಅವರ ಕೊರತೆ ಅಲ್ಲ.

ಕೃತಿಗಳು, ಬದುಕು ಎಲ್ಲವೂ ತೆರೆದ ಬಯಲು

ಭೈರಪ್ಪ ಅವರು ಇಂದು ನಮ್ಮೊಂದಿಗೆ ಇಲ್ಲ ಎಂದು ನನಗೆ ಅನ್ನಿಸುವುದೇ ಇಲ್ಲ, ಏಕೆಂದರೆ ಅವರು ಬರೆದ 24 ಶ್ರೇಷ್ಠ ಕಾದಂಬರಿಗಳು ನಮ್ಮ ಜೊತೆಗೆ ಇವೆ. ಅವರ 94 ವರ್ಷಗಳ ತುಂಬು ಅನುಕರಣೀಯ ಬದುಕು ಇದೆ. ಭಿತ್ತಿಯಲ್ಲಿ ಅವರೇ ಬರೆದ ಹಾಗೆ – ನನಗೆ ಬರೆಯಲು ಅವಕಾಶ ನೀಡಿದ ಅದೃಶ್ಯ ಶಕ್ತಿಗೆ ನಮೋನ್ನಮಃ!

ರಾಜೇಂದ್ರ ಭಟ್ ಕೆ.
ಮುಖ್ಯ ಶಿಕ್ಷಕರು, ಜೇಸಿ ರಾಷ್ಟ್ರೀಯ ತರಬೇತಿದಾರರು.

error: Content is protected !!
Scroll to Top