ನ್ಯಾಯಾಲಯದ ಮೆಟ್ಟಿಲೇರಿದ ಜಾತಿ ಗಣತಿ : ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ

ಸಂವಿಧಾನ ದತ್ತ ಅಧಿಕಾರ ಇಲ್ಲದೆ ಮಾಡುವ ಗಣತಿಗೆ ತಡೆಕೋರಿ ಅರ್ಜಿ

ಬೆಂಗಳೂರು: ಜಾತಿಗಣತಿ ಸಮೀಕ್ಷೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಇಂದು ನಡೆಯಲಿದೆ. ನಿನ್ನೆ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಸರ್ಕಾರದ ಪರ ವಕೀಲರಾದ ಶಶಿಕಿರಣ್ ಶೆಟ್ಟಿ ಮತ್ತು ಅಭಿಷೇಕ್ ಮನುಸಿಂಘ್ವಿ ಹಾಗೂ ಅರ್ಜಿದಾರರ ಪರ ಪ್ರಭುಲಿಂಗ ನಾವದಗಿ, ಅಶೋಕ್ ಹಾರನಹಳ್ಳಿ, ಶ್ರೀರಂಗ, ವಿವೇಕ್ ರೆಡ್ಡಿ ವಾದ ಮಂಡಿಸಿದ್ದಾರೆ. ವಾದ-ಪ್ರತಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ಪ್ರಭುಲಿಂಗ ನಾವದಗಿ ಸರ್ಕಾರದ ಆದೇಶದ ಪ್ರತಿ ಉಲ್ಲೇಖಿಸಿ ವಾದ ಮಂಡನೆ ಮಾಡಿದರು. ಸಮೀಕ್ಷೆಗೆ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ನಮೂದಿಸುವುದು. ಕಡ್ಡಾಯ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಈ ರೀತಿ ಸಮೀಕ್ಷೆ ಮಾಡುವುದಕ್ಕೆ ಅಧಿಕಾರ ಇಲ್ಲ. ಸಂವಿಧಾನದ ಪ್ರಕಾರ ಇದಕ್ಕೆ ಅಧಿಕಾರ ಇಲ್ಲ. ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಹಿಂದುಳಿದ ಬಗ್ಗೆ ರಾಜ್ಯ ಸರ್ಕಾರ ಪತ್ತೆ ಮಾಡುವುದಕ್ಕೆ ಅಧಿಕಾರ ಇಲ್ಲ. ಸಂವಿಧಾನಕ್ಕೆ 105ನೇ ತಿದ್ದುಪಡಿ ಮಾಡುವುದಕ್ಕೂ ಮುನ್ನ 342(ಎ)ನಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಬೇಕು. ಈ ಪ್ರಕಾರ ಮಾಡುವ ಹಾಗೇ ಇಲ್ಲ. ಹಾಗೇನಾದರೂ ಮಾಡುವುದಿದದರೆ ಕೇಂದ್ರ ಸರ್ಕಾರ ಮಾಡಬಹುದು. ಮನೆಯ ಮುಖ್ಯಸ್ಥನ ಸಂಪೂರ್ಣ ವಿವರ ಕೇಳಲಾಗಿದೆ. ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಸರ್ವೆ ಅಧಿಕಾರವಿಲ್ಲ. ರಾಷ್ಟ್ರಪತಿಗಳು ಮಾತ್ರ ಹಿಂದುಳಿದ ವರ್ಗಗಳ ಅಧಿಸೂಚನೆ ಹೊರಡಿಸಬಹುದು ಎಂದು ವಾದಿಸಿದರು.





















































 
 

ಒಕ್ಕಲಿಗರ ಪರ ವಕೀಲ ಅಶೋಕ್ ಹಾರ್ನಹಳ್ಳಿ ವಾದ ಮಂಡಿಸಿ, ಜನರಲ್ಲಿ ಗೊಂದಲ ಸೃಷ್ಟಿಸುವುದೇ ಈ ರಾಜ್ಯ ಸರ್ಕಾರದ ಉದ್ದೇಶ ಆಗಿದೆ. ಜಾತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡುತ್ತಾ ಇದೆ. ಕೇಂದ್ರ ಸರ್ಕಾರ ಈಗಾಗಲೇ 2027ರ ಮಾ.1ರಿಂದ ಜನಗಣತಿ ನಡೆಸಲಿದೆ. ಜನಗಣತಿಯ ಸಂದರ್ಭದಲ್ಲೇ ಜಾತಿಗಣತಿ ನಡೆಸಲು ನಿರ್ಧರಿಸಿದೆ. ರಾಜ್ಯ ಸರ್ಕಾರಗಳ ಗಣತಿ ಉದ್ದೇಶದ ಬಗ್ಗೆ ಹಲವು ಅನುಮಾನಗಳಿವೆ. ಹೀಗಾಗಿಯೇ ಕೇಂದ್ರ ಸರ್ಕಾರ ದೇಶಾದ್ಯಂತ ಗಣತಿಗೆ ನಿರ್ಧರಿಸಿದೆ. ಈ ಹಿಂದೆ ಮಾಡಿರುವ ಸಮೀಕ್ಷೆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಹಿಂದಿನ ಸಮೀಕ್ಷೆ ಏನಾಯಿತು ಗೊತ್ತಿಲ್ಲ. 2015ರಲ್ಲಿ ರಾಜ್ಯ ಸರ್ಕಾರ ಮಾಡಿದ ಸರ್ವೆ ಪ್ರಶ್ನಿಸಲಾಗಿತ್ತು. 2024ರಲ್ಲಿ ಸಲ್ಲಿಸಿದ ಸರ್ವೆ ವರದಿಯ ಸ್ಥಿತಿ ಏನಾಗಿದೆ ತಿಳಿದಿಲ್ಲ.

ಹಿಂದೆ 150 ಕೋಟಿ ರೂ. ಖರ್ಷಿನಲ್ಲಿ ಸರ್ವೆ ಮಾಡಿ ಈಗ ಮತ್ತೆ 420 ಕೋಟಿ ವೆಚ್ಚದಲ್ಲಿ ಸರ್ವೆ. 1,561 ಜಾತಿಗಳನ್ನು ಸರ್ವೆ ಮಾಡಲು ಸರ್ಕಾರ ಮುಂದಾಗಿದೆ. ಹೊಸ ಹೊಸ ಜಾತಿಗಳನ್ನು ಸರ್ಕಾರ ಸೃಷ್ಟಿಸಿದೆ. ಜಾತಿಗಳ ಬಗ್ಗೆ ವಿಶ್ಲೇಷಣೆ ಇಲ್ಲದೆ ಸರ್ಕಾರ ಸರ್ವೆಗೆ ಮುಂದಾಗಿದೆ. ಡಿಜಿಟಲ್ ರೂಪದಲ್ಲಿ ಸಂಗ್ರಹ ಮಾಡುವ ದತ್ತಾಂಶ ಸೋರಿಕೆ ಆಗುವ ಸಾಧ್ಯತೆ ಹೆಚ್ಚಿದೆ. ಸಮೀಕ್ಷೆ ಆದ ಬಳಿಕ ಯಾರ ಬಳಿ ಇರಲಿದೆ ಅನ್ನುವುದು ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲ. ಕೆಲವೊಂದು ವೈಯಕ್ತಿಕ ವಿಚಾರವನ್ನು ಸಮೀಕ್ಷೆಯಲ್ಲಿ ಕೇಳಲಾಗುತ್ತಿದೆ. ಸಂವಿಧಾನದ ಕೇಂದ್ರ ಪಟ್ಟಿಯಲ್ಲಿ ಜನಗಣತಿ ಬರುತ್ತದೆ. ಕೇಂದ್ರ ಸಂಗ್ರಹಿಸಿದ ಅಂಕಿಅಂಶಗಳಿಗೆ ಸೂಕ್ತ ರಕ್ಷಣೆ ಒದಗಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಇಂತಹ ಯಾವುದೇ ರಕ್ಷಣೆ ಒದಗಿಸಿಲ್ಲ. ಮಾಹಿತಿಯ ಖಾಸಗಿತನದ ಹಕ್ಕನ್ನು ಸುಪ್ರೀಂ ಕೋರ್ಟ್ ಗುರುತಿಸಿದೆ. ಡಿಜಿಟಲ್ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ಕೆ.ಎಸ್.ಪುಟ್ಟಸ್ವಾಮಿ ಪ್ರಕರಣದ ತೀರ್ಪು ಉಲ್ಲೇಖಿಸಿ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು.

ಸರ್ಕಾರದ ಪರವಾಗಿ ಅಭಿಷೇಕ್ ಮನುಸಿಂಘ್ವಿ ವಾದ ಮಂಡನೆ ಮಾಡಿ ಇದು ಗಣತಿ ಅಲ್ಲ, ಇದೊಂದು ಸಮೀಕ್ಷೆ ಅಷ್ಟೇ ಎಂದರು. ಎರಡಕ್ಕೂ ಏನ್ ವ್ಯತ್ಯಾಸವಿದೆ? ಎರಡು ಒಂದೇ ಅಲ್ವಾ ಎಂದು ಸಿಜೆ ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮನುಸಿಂಘ್ವಿ, ಅರ್ಜಿದಾರರು ಜಾತಿ ಸಮೀಕ್ಷೆ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಇದು ಸಾಮಾಜಿಕ-ಆರ್ಥಿಕ ಸಮೀಕ್ಷೆ ಮಾತ್ರ. ರಾಜ್ಯ ಸರ್ಕಾರಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರ ಸಮೀಕ್ಷೆ ಮಾಡುವ ಅಧಿಕಾರ ಸಂವಿಧಾನವೇ ಕಲ್ಪಿಸಿದೆ. ಇದು ಕೇವಲ ದತ್ತಾಂಶ ಸಂಗ್ರಹದ ವಿಚಾರ ಆಗಿದೆ. ಕರ್ನಾಟಕ ಸರ್ಕಾರ ಈಗಾಗಲೇ ನಾಲ್ಕು ಬಾರಿ ಈ ರೀತಿಯ ಸಮೀಕ್ಷೆಗಳನ್ನು ಮಾಡಿಸಿದೆ. ತಡೆಯಾಜ್ಞೆ ನೀಡಿದರೆ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಇದಕ್ಕೆ ತಡೆಯಾಜ್ಞೆ ನೀಡಬಾರದು ಎಂದು ಮನವಿ ಮಾಡಿದರು.

ಹಿಂದುಳಿದ ಆಯೋಗದ ಪರ ರವಿವರ್ಮ ಕುಮಾರ್ ವಾದ ಮಂಡಿಸಿ, ನಾವು ಆಧಾರ್ ಕಾರ್ಡ್ ಪಡೆಯುತ್ತಿರುವುದು ಕೆವೈಸಿ ವಿಚಾರಕ್ಕಾಗಿ ಎಂದರು.

error: Content is protected !!
Scroll to Top