ಪುತ್ತೂರು: ಇಲ್ಲಿನ ಬೆಟ್ಟಂಪಾಡಿಯ ಬಾಲ ಪ್ರತಿಭೆ ಸೋನಿಕಾ ಜನಾರ್ದನ್ ಮೈಸೂರಿನಲ್ಲಿ ಜರುಗಿದ ದಸರಾ ಯುವ ಸಂಭ್ರಮದಲ್ಲಿ ಸಂವಿಧಾನ ಪೀಠಿಕೆಯ ಹಾಡನ್ನು ಹಾಡಿ ಜನಮೆಚ್ಚುಗೆ ಗಳಿಸಿದ್ದಾಳೆ.
ಸಚಿವ ಮಹದೇವಪ್ಪರಿಂದ ಪ್ರಶಂಸೆ
ಮೈಸೂರಿನ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮದಲ್ಲಿ ಸೋನಿಕಾ ಜನಾರ್ಧನ್‌ರವರು ಡಾ. ಹಂಸಲೇಖಾಅವರು ಸಂಗೀತ ಸಂಯೋಜನೆ ಮಾಡಿರುವ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿರಚಿತ ಭಾರತೀಯ ಸಂವಿಧಾನದ ಸಾರವನ್ನು ಪೀಠಿಕೆಯನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಸರ್ವತ್ರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ದ. ಕ ಜಿಲ್ಲೆಯಿಂದ ಪ್ರಪ್ರಥಮ ಬಾರಿಗೆ ಮೈಸೂರು ದಸರಾ ಯುವ ಸಂಭ್ರಮದ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆಗೆ ಸೋನಿಕಾ ಪಾತ್ರರಾಗಿದ್ದಾರೆ.
ಈಕೆ ಈಗಾಗಲೇ ಅನೇಕ ಪ್ರಮುಖ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದು ಆಕೆಯ ಹೆಚ್ಚುಗಾರಿಕೆ.
ಹೆಚ್.ಸಿ. ಮಹದೇವಪ್ಪರಿಂದ ಸನ್ಮಾನ
ರಾಜ್ಯ ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪರ ನೇತೃತ್ವದಲ್ಲಿ ವಿವಿಧ ಗಣ್ಯರು ಬಾಲ ಈ ಅಪೂರ್ವ ಬಾಲಪ್ರತಿಭೆಯನ್ನು ಪ್ರಶಂಸಿಸಿ ಗೌರವಿಸಿದ್ದಾರೆ.
ಸೋನಿಕಾ ಈಗ ಮೈಸೂರಿನ ಐಡಿಯಲ್ ಜಾವಾ ರೋಟರಿ ಶಾಲೆಯ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
ವಂಶ ಪಾರಂಪರ್ಯ ಜನಿತ ಪ್ರತಿಭೆ
ಸೋನಿಕಾಳ ತಂದೆ ಜನಾರ್ದನ್‌ರವರು ಮೈಸೂರಿನ ಐದನೇ ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕರಾಗಿದ್ದು ಇವರು ತಬಲಾ, ಮದ್ದಳೆ, ಹಾರ್ಮೋನಿಯಂ ಮುಂತಾದ ವಾದ್ಯ ವಾದನದಲ್ಲಿ ನಿಪುಣರು. ಇವರ ಪತ್ನಿ ಪ್ರಮೀಳಾ ಜನಾರ್ಧನ್ ಅವರೂ ಕಲಾ ಪೋಷಕಿಯಾಗಿದ್ದಾರೆ.
ಚೋಮ ಬೆಟ್ಟಂಪಾಡಿಯವರ ಪೌತ್ರಿ
ರಾಜ್ಯ ಪುರಸ್ಕಾರ ವಿಜೇತ ಚೋಮ ಬೆಟ್ಟಂಪಾಡಿಯವರು ಈ ಭಾಗದ ಕಂಚಿನ ಕಂಠದ ಗಾಯಕರಾಗಿ ಪ್ರಸಿದ್ಧರು. ಸೋನಿಕಾ ಚೋಮರವರ ಮರಿಮಗಳಾಗಿದ್ದಾಳೆ.
























