ಹ್ಯಾಂಡ್‌ಶೇಕ್ ವಿವಾದದ ಬಳಿಕ ಮತ್ತೆ ಬದ್ಧ ವೈರಿಗಳ ನಡುವೆ ಪಂದ್ಯ
ದುಬೈ : ದುಬೈಯಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕೂಟದಲ್ಲಿ ಇಂದು ರಾತ್ರಿ ಮತ್ತೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಹೈವೋಲ್ಟೇಜ್ ಮುಖಾಮುಖಿಯಾಗಲಿವೆ. ಈ ಬಾರಿ ಎರಡೂ ತಂಡಗಳು ಸೂಪರ್-4 ಹಂತದಲ್ಲಿ ಪೈಪೋಟಿ ನಡೆಸುತ್ತಿವೆ. ಫೈನಲ್ ತಲುಪಲು ಈ ಪಂದ್ಯ ನಿರ್ಣಾಯಕವಾಗಿದೆ.
ಈ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೂರ್ಯಕುಮಾರ್ ಯಾದವ್ ಯಾವ ಹನ್ನೊಂದರ ಬಳಗವನ್ನು ಕಟ್ಟಿಕೊಂಡು ಕಣಕ್ಕಿಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ? ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವನ್ನು ನೋಡಿದರೆ, ಸೂಪರ್ 4 ಸುತ್ತಿನ ಪಂದ್ಯಕ್ಕೆ ತಂಡದಲ್ಲಿ ಎರಡು ಬದಲಾವಣೆಗಳಾಗುವುದು ಖಚಿತವಾಗಿದೆ.
ಪಾಕಿಸ್ತಾನ ವಿರುದ್ಧದ ಸೂಪರ್ ಫೋರ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆಗಳಾಗಲಿದ್ದು, ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ತಂಡದಿಂದ ಹೊರಬೀಳಲಿದ್ದಾರೆ. ವಾಸ್ತವವಾಗಿ ಒಮಾನ್ ವಿರುದ್ಧದ ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ಇಬ್ಬರೂ ಆಟಗಾರರಿಗೆ ಅವಕಾಶ ಸಿಕ್ಕಿತ್ತು. ಇವರ ಬದಲಿಯಾಗಿ ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಪಾಕಿಸ್ತಾನ ವಿರುದ್ಧದ ಸೂಪರ್ ಫೋರ್ ಪಂದ್ಯಕ್ಕೆ ಬುಮ್ರಾ ಮತ್ತು ವರುಣ್ ಟೀಂ ಇಂಡಿಯಾಕ್ಕೆ ಮರಳಲಿದ್ದಾರೆ.
ಪಾಕಿಸ್ತಾನ ವಿರುದ್ಧದ ಸೂಪರ್ 4 ಪಂದ್ಯಕ್ಕೆ ಬುಮ್ರಾ ಮತ್ತು ವರುಣ್ ತಂಡದಲ್ಲಿ ಆಯ್ಕೆಯಾಗುವುದರಿಂದ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ತಂಡದಿಂದ ಹೊರಬೀಳಲಿದ್ದಾರೆ. ಉಳಿದಂತೆ ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿಯನ್ನು ಹೊರಲಿದ್ದಾರೆ. ಸೂರ್ಯಕುಮಾರ್ ಯಾದವ್ 3ನೇ ಕ್ರಮಾಂಕದಲ್ಲಿ ಆಡಿದರೆ, ನಂತರ ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಆಡಲಿದ್ದಾರೆ. ಸ್ಪಿನ್ ಬೌಲರ್ಗಳಾಗಿ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಆಡಲಿದ್ದು, ಜಸ್ಪ್ರೀತ್ ಬುಮ್ರಾ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಬುಮ್ರಾಗೆ ಆಲ್‌ರೌಂಡರ್‌ಗಳಾದ ಪಾಂಡ್ಯ ಮತ್ತು ದುಬೆ ಬೆಂಬಲ ನೀಡಲಿದ್ದಾರೆ.
ಭಾರತದ ಸಂಭಾವ್ಯ ತಂಡ: ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.
ಹ್ಯಾಂಡ್‌ಶೇಕ್ ವಿವಾದದ ಬಳಿಕ ಉಭಯ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿರುವುದರಿಂದ ಈ ಪಂದ್ಯಸಾಕಷ್ಟು ಕುತೂಹಲ ಕೆರಳಿಸಿದೆ. ಈ ಹೈವೋಲ್ಟೇಜ್ ಕದನಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮ್ಯಾಚ್ ರೆಫರಿಯನ್ನು ನೇಮಿಸಿದ್ದು ಮೊದಲ ಮುಖಾಮುಖಿಯಲ್ಲಿ ವಿವಾದ ಹುಟ್ಟಿಕೊಳ್ಳುವುದಕ್ಕೆ ಕಾರಣರಾಗಿದ್ದ ಆಂಡಿ ಪೈಕ್ರಾಫ್ಟ್ ಅವರನ್ನೇ ಈ ಸೂಪರ್ 4 ಸುತ್ತಿನ ಪಂದ್ಯಕ್ಕೂ ಮ್ಯಾಚ್ ರೆಫರಿಯನ್ನಾಗಿ ಆಯ್ಕೆ ಮಾಡಿದೆ. ಈ ಮೂಲಕ ಪಾಕಿಸ್ತಾನದ ಯಾವ ಮನವಿಯನ್ನೂ ಕ್ರಿಕೆಟ್ ಕೌನ್ಸಿಲ್ ಕ್ಯಾರೇ ಅಂದಿಲ್ಲ.
ಈ ಎರಡೂ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾದಾಗಲೂ ಪೈಕ್ರಾಫ್ಟ್ ಪಂದ್ಯದ ರೆಫರಿಯಾಗಿದ್ದರು. ಹ್ಯಾಂಡ್‌ಶೇಕ್ ವಿವಾದದ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪೈಕ್ರಾಫ್ಟ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಅವರನ್ನು ಪಂದ್ಯಾವಳಿಯಿಂದ ತೆಗೆದುಹಾಕುವಂತೆ ಒತ್ತಾಯಿಸಿತ್ತು.
ಟಾಸ್ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಸಲ್ಮಾನ್ ಅಲಿ ಅಘಾ ಅವರನ್ನು ಕೈಕುಲುಕದಂತೆ ಪೈಕ್ರಾಫ್ಟ್ ಕೇಳಿಕೊಂಡಿದ್ದರು ಎಂದು ಪಿಸಿಬಿ ಆರೋಪಿಸಿತ್ತು. ಆದಾಗ್ಯೂ, ಇಬ್ಬರು ನಾಯಕರನ್ನು ಮುಜುಗರದಿಂದ ಪಾರು ಮಾಡಲು ಪೈಕ್ರಾಫ್ಟ್ ಹಾಗೆ ಮಾಡಿದ್ದಾರೆ ಎಂದು ಐಸಿಸಿ ಆ ನಂತರ ಸ್ಪಷ್ಟನೆ ನೀಡಿತ್ತು. ಪಾಕಿಸ್ತಾನದ ಕೊನೆಯ ಲೀಗ್ ಪಂದ್ಯಕ್ಕೂ ಆಂಡಿ ಪೈಕ್ರಾಫ್ಟ್ ಮ್ಯಾಚ್ ರೆಫರಿಯಾಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಪಾಕಿಸ್ತಾನ ಯುಎಇ ವಿರುದ್ಧ ಪಂದ್ಯವನ್ನು ಆಡಲು ನಿರಾಕರಿಸಿತು. ಆದರೆ ರೆಫರಿ ಆಂಡಿ ಪೈಕ್ರಾಫ್ಟ್ ಹಾಗೂ ಪಿಸಿಬಿ ನಡುವೆ ಸಂಧಾನ ಸಭೆ ನಡೆದ ಬಳಿಕ ಪಾಕಿಸ್ತಾನ ಪಂದ್ಯವನ್ನು ಆಡಲು ಒಪ್ಪಿಕೊಂಡಿತು.
ಇಂದು ಪಂದ್ಯ ನಡೆಯಲಿರುವ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿಯೇ ಭಾರತ ಮತ್ತು ಪಾಕಿಸ್ತಾನ ನಡುವಿನ ಗುಂಪು ಹಂತದ ಮೊದಲ ಪಂದ್ಯ ನಡೆದಿತ್ತು. ಆ ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಮೊದಲು ಬೌಲಿಂಗ್ ಮಾಡಿದ ಭಾರತ ತಂಡ ಪಾಕಿಸ್ತಾನವನ್ನು ಕೇವಲ 127 ರನ್‌ಗಳಿಗೆ ಸೀಮಿತಗೊಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡ 15.5 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ದಡ ಮುಟ್ಟಿತು.
























